ಮಂಗಳೂರು, ಫೆ.23 (DaijiworldNews/PY): ಲಕ್ಷ್ಮೀ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ನ ಜಿ.ಎನ್.ಎಂ. 26ನೇ ಬ್ಯಾಚ್ ಹಾಗೂ ಕಾಲೇಜ್ ಆಫ್ ನರ್ಸಿಂಗ್ನ 24ನೇ ಬ್ಯಾಚ್ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗುವ ಹಾಗೂ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವು ಫೆ.23ರ ಮಂಗಳವಾರದಂದು ನಗರದ ಕುಂಟಿಕಾನದ ಎಜೆಐಎಂಎಸ್ ಸಭಾಂಗಣದಲ್ಲಿ ನಡೆಯಿತು.



















3ನೇ ವರ್ಷದ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳು ನಡೆಸಿದ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಧ್ಯಾಪಕರು ಹಾಗೂ ಕ್ಯೂಎಂಆರ್ ಡಾ.ಎಲ್ಸಾ ಸನತೊಂಬಿ ದೇವಿ ಆಸೀನರಾಗಿದ್ದರು. ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಸ್ವಾಗತಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳು ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೈದ್ಯಕೀಯ ಶಾಸ್ತ್ರ ಚಿಕಿತ್ಸಾ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಾಲಿನಿ ಫೆರ್ನಾಂಡೀಸ್ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಶುಶ್ರೂಷ ವೃತ್ತಿಯ ಪ್ರವರ್ತಕರಿಗೆ ಗೌರವ ಸಂಕೇತವಾಗಿ ಗಣ್ಯರು ಫ್ಲಾರೆನ್ಸ್ ನೈಟಿಂಗೇಲ್' ಅವರ ಭಾವಚಿತ್ರದ ಮುಂದೆ ದೀಪ ಹಚ್ಚಿದರು. ಬುದ್ಧಿವಂತಿಕೆ, ಜ್ಞಾನ ಮತ್ತು ಸಹಾನುಭೂತಿಯ ಸಂಕೇತವಾಗಿ ಗಣ್ಯರು ಹಾಗೂ ಅಧ್ಯಾಪಕರು 176 ಶುಶ್ರೂಷಕ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿದರು.
ಒಬಿಜಿ ನರ್ಸಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕಿ ಸಂಧ್ಯಾ ಡಿ ಅಲ್ಮೇಡಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ "ಪ್ರೀತಿಯೊಂದು ದೀಪವನ್ನು ಬೆಳಗುವುದು' ಎಂಬ ಸುಶ್ರಾವ್ಯ ಹಾಗೂ ಸುಮಧುರ ಹಾಡು ಸಮಾರಂಭದ ಘನತೆ ಗೌರವಕ್ಕೆ ಸಾಕ್ಷಿಯಾಯಿತು. ಶುಶ್ರೂಷಾ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿಯಂತೆ ವೃತ್ತಿಪರ ನರ್ಸ್ ಆಗಿ ತಮ್ಮ ಕರ್ತವ್ಯಗಳಿಗೆ ಯಾವುದೇ ಚ್ಯುತಿ ಬರದಂತೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.
ಮುಖ್ಯ ಅತಿಥಿಗಳಾದ ಪ್ರೊ. ಸನತೊಂಬಿ ದೇವಿ ಮಾತನಾಡಿ, ನರ್ಸಿಂಗ್ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಮುಂದೆ ನರ್ಸಿಂಗ್ ವೃತ್ತಿ ಮಾಡಲು ತೆಗೆದುಕೊಂಡ ನಿರ್ಧಾರಕ್ಕೆ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ತಮ್ಮ ವೃತ್ತಿ ಜೀವನದಲ್ಲಿ ಶಿಸ್ತು, ತೊಡಗಿಸಿಕೊಳ್ಳುವಿಕೆ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
"ಶುಶ್ರೂಷಕಿಯರು ಸಮಾಜದಲ್ಲಿ ಶುಶ್ರೂಷೆ ಅತ್ಯಗತ್ಯವಿರುವ ಮಂದಿಗೆ ದೊಡ್ಡ ಆಸ್ತಿ" ಎಂದು ಬಣ್ಣಿಸಿದರು.
ಕಾಲೇಜಿನ ಪ್ರಾಂಶುಪಾಲ ಲೆರಿಸ್ಸಾ ಮಾರ್ತಾ ಸ್ಯಾಮ್ಸ್ ಅಧ್ಯಕ್ಷೀಯ ಮಾತುಗಳನ್ನಾಡಿ, ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದರು. ನರ್ಸಿಂಗ್ ವೃತ್ತಿಯ ಪ್ರಾಮುಖ್ಯತೆಯನ್ನು ಅರಿತುಕೊಂಡು ವೃತ್ತಿಗೆ ಅಗತ್ಯವಾಗಿ ಬೇಕಾದ ಕೌಶಲ್ಯ, ಜ್ಞಾನವನ್ನು ಬೆಳೆಸಿಕೊಳ್ಳಬೇಕು. ತಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅಗತ್ಯ ಬೆಂಬಲ ಹಾಗೂ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿ ಡಾ. ಜೆನ್ನಿಫರ್ ಡಿ'ಸೋಜಾ, ಧನ್ಯವಾದ ಸಲ್ಲಿಸಿದರು.
ಕುಮಾರಿ. ನಿಕ್ಕು ಎ ತೋಮಸ್ ಮತ್ತು ಕುಮಾರಿ.ಸ್ನೇಹಾ ರಾಯ್ ಕಾರ್ಯಕ್ರಮವನ್ನು ನಿರೂಪಿಸಿದರು.