ಮಂಗಳೂರು, ಜು 16: ರಾಷ್ಟ್ರೀಯ ಹೆದ್ದಾರಿ ೬೬ರ ಪಂಪ್ವೆಲ್ನಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಕೊನೆಗೂ ಲೋಕಾರ್ಪಣೆಗೊಳ್ಳುವ ಕಾಲ ಕೂಡಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಜುಲೈ 17ರ ಮಂಗಳವಾರ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ ಉದ್ಘಾಟನೆ ಭಾಗ್ಯ ಕಾಣದೇ ಬಾಕಿ ಉಳಿದಿದ್ದ ಪಂಪ್ವೆಲ್ ಬಳಿಯ ಇಂದಿರಾ ಕ್ಯಾಂಟೀನ್ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತು. ಚುನಾವಣೆ ಬಳಿಕ ಪರಿಷತ್ ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಮತ್ತೆ ಉದ್ಘಾಟನೆ ಮುಂದೂಡಲ್ಪಟ್ಟಿತು. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಕಾರಣ ಉದ್ಘಾಟನೆಯಲ್ಲಿ ಮತ್ತೆ ಗೊಂದಲ ಮುಂದುವರಿಯಿತು. ಅಂತೂ ಇಂತೂ ಕೊನೆಗೂ ಮಂಗಳೂರಿನ ಪಂಪ್ವೆಲ್ ಬಳಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ನಾಳೆ 11 ಗಂಟೆಗೆ ಲೋಕಾರ್ಪಣೆಗೊಳ್ಳುತ್ತಿದೆ.
ಈಗಾಗಲೇ ಉರ್ವಸ್ಟೋರ್, ಕಾವೂರು, ಸ್ಟೇಟ್ಬ್ಯಾಂಕ್, ಸುರತ್ಕಲ್ ಮತ್ತು ತೊಕ್ಕೊಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾಚರಣೆ ಮಾಡುತ್ತಿದೆ. ಈ ಮೂಲಕ ಪರಿಸರದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಕ್ಯಾಂಟೀನ್ನಲ್ಲಿ ಮಿತದರದಲ್ಲಿ ಅತ್ಯುತ್ತಮವಾದ ತಿಂಡಿ, ಊಟದ ವ್ಯವಸ್ಥೆ ಸಿಗಲಿದೆ. ಈಗಾಗಲೇ ನಗರದಲ್ಲಿ 5 ಇಂದಿರಾ ಕ್ಯಾಂಟೀನ್ ಗಳಿದ್ದು ಈ ಪಟ್ಟಿಗೆ ಮತ್ತೊಂದು ಸೇರ್ಪಡೆಗೊಳ್ಳುತ್ತಿದೆ. ಪಂಪ್ವೆಲ್ ಜಂಕ್ಷನ್ನಲ್ಲಿ ನೂರಾರು ಮಂದಿ ಕೂಲಿಕಾರ್ಮಿಕರು, ಆಸ್ಪತ್ರೆಯ ರೋಗಿಗಳು, ಹೆದ್ದಾರಿ ಕಾಮಗಾರಿ ನಿರ್ವಹಿಸುವ ಕೂಲಿ ಕಾರ್ಮಿಕರು, ದಿನಕೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿನ ಇಂದಿರಾ ಕ್ಯಾಂಟೀನ್ ಆ ವರ್ಗದ ಜನರಿಗೆ ಲಾಭದಾಯಕವಾಗಲಿದೆ.