ಮಂಗಳೂರು, ಫೆ.24 (DaijiworldNews/MB) : ಕೇರಳದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆ ಫೆಬ್ರವರಿ 23 ರಂದು ಮಂಗಳವಾರ ಕೇರಳದ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವ ಜನರಿಂದ ಕೊರೊನಾ ನೆಗೆಟಿವ್ ವರದಿಯನ್ನು ತೋರಿಸಲು ಹೇಳಲಾಗುತ್ತಿತ್ತು. ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳು ಗಡಿಯಲ್ಲಿ ನಿಂತು ಪ್ರಯಾಣಿಕ ನೆಗೆಟಿವ್ ವರದಿಯನ್ನು ಪರಿಶೀಲಿಸುತ್ತಿದ್ದರು.

ಪ್ರಯಾಣಿಕರು ತಪಾಸಣೆಗಾಗಿ ಗಡಿ ಭಾಗದಲ್ಲಿ ಸಾಲಿನಲ್ಲಿ ಕಾಯಬೇಕಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ವಿರೋಧಿಸಿ ಭಾರತ ಪ್ರಜಾಸತಾತ್ಮಕ ಯುವಜನ ಸಂಘಟನೆ (ಡಿವೈಎಫ್ಐ) ಕಾರ್ಯಕರ್ತರು ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರು.
ಜನರಿಗೆ ಕೊರೊನಾ ವರದಿ ಪಡೆಯಲು ಕೊಂಚ ಸಮಯಾವಕಾಶ ಬೇಕಾಗಿರುವ ಹಿನ್ನೆಲೆ ಮಂಗಳವಾರ ತಪಾಸಣೆಯು ಸ್ವಲ್ಪ ಸಡಿಲವಾಗಿತ್ತು. ಗುರುತಿನ ಚೀಟಿಗಳ ಆಧಾರದ ಮೇಲೆ ಹಲವರಿಗೆ ಗಡಿಯಲ್ಲಿ ತೆರಳಲು ಅವಕಾಶ ನೀಡಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು, ''ಕರ್ನಾಟಕ ಸರ್ಕಾರವು ತನ್ನ ಗಡಿಯಲ್ಲಿ ವಿಧಿಸಿರುವ ನಿರ್ಬಂಧಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗಡಿಯನ್ನು ಮುಚ್ಚುವುದು ಮತ್ತು ಪ್ರಯಾಣ ನಿರ್ಬಂಧ ಹೇರುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ'' ಎಂದು ಹೇಳಿದ್ದಾರೆ.