ಪುತ್ತೂರು, ಫೆ.24 (DaijiworldNews/MB) : ಬಸ್ಸಿನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿಯೋರ್ವಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸುಳ್ಯದ ಅರೇಬಿಕ್ ಶಾಲೆಯ ಶಿಕ್ಷಕ ಮೊಹಮ್ಮದ್ ಸೈಫುಲ್ಲಾ (32) ಅವರನ್ನು ಫೆಬ್ರವರಿ 23 ಮಂಗಳವಾರ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಚಿಕ್ಕಮಗಳೂರು ಮೂಲದವನಾಗಿದ್ದಾನೆ. ಬಸ್ನಲ್ಲಿ ಪ್ರಯಾಣಿಸುವಾಗ ಆತ ಆಗಾಗ್ಗೆ ವಿದ್ಯಾರ್ಥಿಯನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದನೆಂದು ಹೇಳಲಾಗಿದೆ. ಈ ವಿದ್ಯಾರ್ಥಿನಿಯು ಆತನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಬಸ್ನಲ್ಲಿನ ಕಂಡಕ್ಟರ್ಗೆ ದೂರು ನೀಡಿದ್ದಾಳೆ.
ಚಾಲಕ ನೇರವಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರು ಬಸ್ ನಿಲ್ಲಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲು ಸಹಾಯ ಮಾಡಿದ್ದು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇದೇ ರೀತಿಯ ಘಟನೆ ಸೋಮವಾರ ರಾತ್ರಿ ನಡೆದಿತ್ತು. ಯುವತಿಯೊಬ್ಬಳು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ರಫೀಕ್ ಎಂಬ ಪ್ರಯಾಣಿಕ ತನ್ನ ಮೇಲೆ ಕಿರುಕುಳ ನೀಡಿದ್ದಾನೆ ಎಂದು ಯುವತಿಯು ಆರೋಪಿಸಿದ್ದಳು. ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯ ಸಂಬಂಧಿಯೊಬ್ಬರು ರಫೀಕ್ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಆರೋಪಿಯ ಬೆಂಬಲಕ್ಕೆ ಬಂದ ತಂಡವೊಂದು ವಿದ್ಯಾರ್ಥಿನಿಯ ಸಂಬಂಧಿಯ ಮೇಲೆ ಹಲ್ಲೆ ನಡೆಸಿತ್ತು.
ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.