ಕಾಸರಗೋಡು, ಫೆ.24 (DaijiworldNews/MB) : ಜಿಲ್ಲೆಯ ಪಯ್ಯನ್ನೂರಿನ ಬಾಡಿಗೆ ಮನೆಯಲ್ಲಿ ತಮಗೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳು ಫೆಬ್ರವರಿ 23 ರ ಮಂಗಳವಾರ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡರು.

ವೆಸ್ಟ್ ಎಳೇರಿತಟ್ಟ್ನ ಟಿ ರವಿ ಅವರ ಪುತ್ರ ಶಿವಪ್ರಸಾದ್ (28) ಮತ್ತು ಏಯಿಲೋಟ್ ಮರಂಜೇರಿ ರಾಜನ್ ಅವರ ಪುತ್ರಿ ಆರ್ಯ (21) ಪ್ರಾಣ ಕಳೆದುಕೊಂಡ ಪ್ರೇಮಿಗಳು.
ಫೆಬ್ರವರಿ 19 ರ ಸಂಜೆ ಇಬ್ಬರೂ ತಮಗೆ ಬೆಂಕಿ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 22 ರ ರಾತ್ರಿ ಆರ್ಯ ಸಾವನ್ನಪ್ಪಿದ್ದು, ಶಿವಪ್ರಸಾದ್ ಫೆಬ್ರವರಿ 23 ರಂದು ಕೊನೆಯುಸಿರೆಳೆದರು.
ಶಿವಪ್ರಸಾದ್ ಉದ್ಯೋಗದಲ್ಲಿದ್ದು ಆರ್ಯ ಹಿಂದಿ ಪದವಿ ವಿದ್ಯಾರ್ಥಿನಿಯಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಕುಟುಂಬವು ಆಕೆಯ ಮದುವೆಯನ್ನು ಬೇರೊಬ್ಬನ ಜೊತೆ ನಡೆಸಲು ತೀರ್ಮಾನಿಸಿ ನಿಶ್ಚಿತಾರ್ಥದ ಸಮಾರಂಭವನ್ನು ಫೆಬ್ರವರಿ 21 ಕ್ಕೆ ನಿಗದಿಪಡಿಸಿತ್ತು.
ಫೆಬ್ರವರಿ 19 ರಂದು ತನ್ನ ಹಿಂದಿ ಪರೀಕ್ಷೆಯನ್ನು ಅರ್ಧದಲ್ಲೇ ಮುಗಿಸಿ ತರಗತಿಯಿಂದ ಹೊರಬಂದ ಆರ್ಯ, ಶಿವಪ್ರಸಾದ್ ಜೊತೆ ಆತನ ಬಾಡಿಗೆ ಮನೆಗೆ ಹೋಗಿದ್ದು, ಇಬ್ಬರೂ ತಮ್ಮ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ತಮ್ಮ ಜೀವನವನ್ನು ಕೊನೆಗೊಳಿಸುವ ನಿರ್ಧಾರದ ಬಗ್ಗೆ ಶಿವಪ್ರಸಾದ್ ಬರೆದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಯ್ಯನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.