ಮಂಗಳೂರು, ಫೆ.24 (DaijiworldNews/PY): 2020ರ ನವೆಂಬರ್ನಿಂದ ಹಾಗೂ 2021ರ ಇಲ್ಲಿಯವರೆಗೆ ಕುಳಾಯಿ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ, ನಾಗುರಿ, ಕಪಿತಾನಿಯೋ ಎಂಬಲ್ಲಿರುವ ಕೆನರಾ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಮಂಗಳಾದೇವಿಯ ಎಸ್ಬಿಐ ಎಟಿಂಗಳಲ್ಲಿ ಸ್ಕಿಮ್ಮಿಂಗ್ ಉಪಕರಣಗಳನ್ನು ಅಳವಡಿಸಿ ಎಟಿಎಂ ಗ್ರಾಹಕರ ಡಾಟಾವನ್ನು ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ ದೆಹಲಿ ಸೇರಿದಂತೆ ಬೆಂಗಳೂರು, ಮೈಸೂರು, ಕಾಸರಗೋಡು, ಮಡಿಕೇರಿ, ಗೋವಾ ಮುಂತಾದ ಕಡೆಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿಡ್ರಾ ಮಾಡಿಕೊಂಡು ಮೋಸ ಮಾಡುತ್ತಿದ್ದ ಬಗ್ಗೆ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 22 ಸ್ಕಿಮ್ಮಿಂಗ್ ಪ್ರಕರಣಗಳು ದಾಖಲಾಗಿವೆ.
















ಈ ಸಂಬಂಧ ಕೇರಳದ ತ್ರಿಶೂರ್ ನಿವಾಸಿ ಗ್ಲಾಡಿವಿನ್ ಜಿಂಟೋ ಜೋಯ್ ಅಲಿಯಾಸ್ ಜಿಂಟು (37), ದೆಹಲಿ ಪ್ರೇಮ್ ನಗರ ನಿವಾಸಿ ದಿನೇಶ್ ಸಿಂಗ್ ರಾವತ್ (44), ಕಾಸರಗೋಡು ಕೂಡ್ಲು ನಿವಾಸಿ ಅಬ್ದುಲ್ ಮಜೀದ್ (27) ಹಾಗೂ ಕೇರಳದ ಆಲಪುರ ನಿವಾಸಿ ರಾಹುಲ್ ಟಿ.ಎಸ್ (24) ಎಂಬವರನ್ನು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಹಾಗೂ ಸುವ್ಯವಸ್ಥೆ) ಹಾಗೂ ನಗರ ಪೊಲೀಸ್ ಉಪ ಆಯುಕ್ತ (ಅಪರಾಧ ಹಾಗೂ ಸಂಚಾರ) ಇವರ ನಿರ್ದೇಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.
ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕಿಮ್ಮಿಂಗ್ ಡಿವೈಸ್, ಕೃತ್ಯಕ್ಕೆ ಬಳಸಿದ 2 ಕಾರು, ನಕಲಿ ಎಟಿಎಂ ಕಾರ್ಡ್ಗಳು, ಐದು ಮೊಬೈಲ್, ಎರಡು ಆಪಲ್ ವಾಚ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸುಮಾರು 25,00,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.