ಬಂಟ್ವಾಳ: ಜು 16: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೋಲೀಸರು 30 ಸಾವಿರ ರೂಪಾಯಿ, ಐದು ವಾಹನ ಸಹಿತ ಹತ್ತು ಜನರನ್ನು ಬಂಧಿಸಿದ್ದಾರೆ. ಬಡಗಬೆಳ್ಳೂರು ಗ್ರಾಮದ ಬೀಟ್ ಸಂಖ್ಯೆ 17 ರ ಕೊಳ್ತಮಜಲು ಎಂಬಲ್ಲಿ ಹಣವನ್ನು ಪಣಕ್ಕೆ ಇಟ್ಟು ಕೋಳಿ ಅಂಕ ಆಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು 10 ಜನರನ್ನು ಬಂಧಿಸಿದ್ದಾರೆ.
ಜೊತೆಗೆ ಸ್ಥಳದಲ್ಲಿದ್ದ ಮೂರು ಜೀವಂತ ಕೋಳಿ, ನಾಲ್ಕು ಗಾಯಗೊಂಡ ಕೋಳಿ ಮತ್ತು ಮೂರು ಸತ್ತ ಕೋಳಿ ಗಳನ್ನು ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಂದರ್, ಹರೀಶ್, ಕೇಶವ, ಶಿವಪ್ರಸಾದ್, ಚಂದ್ರಶೇಖರ್, ಮಾಯಿಲಪ್ಪ, ಭಾಸ್ಕರ್, ಆಶೋಕ್, ಚಂದ್ರಶೇಖರ್ ಶೆಟ್ಟಿ, ಅಶೋಕ್ ಶೆಟ್ಟಿ ಎಂಬವರು ಬಂಧಿತರು. ಎ.ಎಸ್.ಪಿ.ಋಷಿಕೇಶ್ ಸೋನಾವಣೆ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಗ್ರಾಮಾಂತರ ಪೋಲೀಸ್ ಎಸ್ಐ ಪ್ರಸನ್ನ ಅವರ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ.