ಮಂಗಳೂರು, ಫೆ.24 (DaijiworldNews/PY): ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಫೆ.24ರ ಬುಧವಾರದಂದು ಒಂದು ದಿನದ ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರ ಸಮಾವೇಶವನ್ನು ಉದ್ಘಾಟಿಸಿದರು.













ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ದ.ಕ.ಜಿಲ್ಲೆಯ ಐದು ಎಕರೆ ಪ್ರದೇಶದಲ್ಲಿ ಐ.ಟಿ ಸಾಫ್ಟ್ವೇರ್ ತಂತ್ರಜ್ಞಾನದ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಇಂದು ಮಂಗಳೂರಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಏತನ್ಮಧ್ಯೆ, ನಾವು ವಿಜ್ಞಾನ-ತಂತ್ರಜ್ಞಾನದತ್ತ ಗಮನ ಹರಿಸುತ್ತೇವೆ. ಗುಣಮಟ್ಟದ ಶಿಕ್ಷಣದತ್ತ ಗಮನಹರಿಸಿದಾಗ, ಅದು ಸಮಾಜದ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಕಾರಣವಾಗುತ್ತದೆ" ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ದ.ಕ ಜಿಲ್ಲೆ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಅಭಿವೃದ್ದಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆಯ ಅಭಿವೃದ್ದಿಗೆ 10 ಸಾವಿರ ಎಕರೆ ವಿಸ್ತೀರ್ಣದ ಲ್ಯಾಂಡ್ ಬ್ಯಾಂಕ್ ನಿರ್ಮಿಸುವ ಗುರಿ ಹೊಂದಿದ್ದೇವೆ. ಶಿರಾಡಿ ಘಾಟ್ನ ಸುರಂಗ ನಿರ್ಮಾಣ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಬಿ. ಸಿ.ರೋಡ್ನಿಂದ ಅಡ್ಡಹೊಳೆವರೆಗಿನ ರಸ್ತೆ ಅಭಿವೃದ್ದಿ ಕಾರ್ಯ ಮಾರ್ಚ್ನಿಂದ ಪ್ರಾರಂಭವಾಗಲಿದೆ. ಮಂಗಳೂರು ಬಂದರು ಅಭಿವೃದ್ದಿಗೆ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಸುಮಾರು 4,000 ಕೋಟಿ ರೂ. ಮೀಸಲಿಡಲಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಸಿಸಿಐ ಅಧ್ಯಕ್ಷ ಸ್ವೀವನ್ ಡೇವಿಡ್, ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಶಾಸಕ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.