ಉಡುಪಿ, ಫೆ. 24 (DaijiworldNews/SM): ಕೊರೋನಾ ಸಂಕಷ್ಟದ ಈ ಸಮಯದಲ್ಲಿ ರಾಮ ಮಂದಿರ ಕಟ್ಟಲು ಊರೂರು ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷೆ ಎತ್ತುತ್ತಿದ್ದಾರೆ. ಯಾಕೆ ಅವರ ಕಾರ್ಯಕರ್ತರಲ್ಲಿ ಹಣ ಇಲ್ಲವೇ? ಅವರಿಂದ ಮಂದಿರ ಕಟ್ಟಲು ಸಾಧ್ಯವಿಲ್ಲವೇ? ಎಂದು ಶೃಂಗೇರಿಯ ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ 'ಜನಧ್ವನಿ' ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಜನಧ್ವನಿ ಪಾದಯಾತ್ರೆ ಮೂರನೇ ದಿನವಾದ ಬುಧವಾರ ಉದ್ಯಾವರ ಬಲಾಯಿಪಾದೆಯಿಂದ ಹೊರಟ ಪಾದಯಾತ್ರೆ ಬ್ರಹ್ಮಾವರ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಯಿತು. ಶಾಸಕರಾದ ಟಿ. ಡಿ. ರಾಜೇಗೌಡ ಮಾತನಾಡಿ, ಹಿಂದೆ ರಾಜೀವ ಗಾಂಧಿಯವರು ದೇವಸ್ಥಾನ ಕಟ್ಟಿಲ್ವೇ? ವಸೂಲಿ ಮಾಡಿದ ಹಣದಿಂದಲೇ ಪ್ರತಿಯೊಂದು ಊರಲ್ಲಿ ರಾಮಮಂದಿರ ಕಟ್ಟಲಿ. ಯಾರ ಆಕ್ಷೇಪವೂ ಇಲ್ಲ. ಯಾವ ಮುಸಲ್ಮಾನರ ವಿರೋಧವೂ ಇಲ್ಲ. ಈ ದೇಶಕ್ಕೆ ಅವರದೂ ಕೊಡುಗೆ ಇದೆ ಎಂದರು.
ಇನ್ನು ಎಪಿಎಮ್ ಸಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಕಳೆದ ಮೂರು ತಿಂಗಳಿನಿಂದ ರೈತರು ಇದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ೨೦೦ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇಂತಹ ಬಲವಂತದ ಹೇರಿಕೆ ಯಾತಕ್ಕಾಗಿ? ಈಗಿನ ಸರ್ಕಾರ ರೈತರ ಕಣ್ಣಲ್ಲಿ ಕಣ್ಣೀರು ಬರಿಸುತ್ತಿದೆ, ಎಂದು ಶಾಸಕ ರಾಜೇಗೌಡ ಟೀಕಿಸಿದರು.