ಉಡುಪಿ, ಫೆ.25 (DaijiworldNews/MB) : ಉಡುಪಿ ಜಿಲ್ಲೆಯು ಕೋರೋನಾದ ಎರಡನೇ ಅಲೆಯಿಂದ ಪಾರಾಗಿಲ್ಲ ಆದರೆ ಸದ್ಯ ನಿಯಂತ್ರಣದಲ್ಲಿದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುತ್ತಿರುವವ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇವೆ. ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಬುಧವಾರ ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಬಳಿಕ ಸೇವೆಯಲ್ಲಿನ ಅನುಭವ ಬಹಳಷ್ಟಿದೆ, ಒತ್ತಡದ ಹೊರತಾಗಿಯೂ ಜಿಲ್ಲೆಗೆ ಮಾಡಿದ ಸೇವೆಯಲ್ಲಿ ತೃಪ್ತಿಯಿದೆ. ಇಲಾಖೆಯ ಸಿಬ್ಬಂದಿ ಗಳು, ಪ್ರೋಗ್ರಾಂ ಅಧಿಕಾರಿಗಳು ಬಹಳ ಸಹಕಾರ ಕೊಟ್ಟಿದ್ದರಿಂದ ಒತ್ತಡದ ನಡುವೆಯೂ ಸೇವೆ ಮಾಡಲು ಸಹಾಯವಾಯ್ತು, ಎಂದರು.
ಉಡುಪಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಪಾಸಿಟಿವಿಟಿಯ ಪ್ರಮಾಣ ಶೇ.6.5 ಆಗಿದೆ. ಈವರೆಗೆ 189 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. ಒಟ್ಟಾರೆಯಾಗಿ 0.81 ಆಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 23557 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಶೇ.98.94 ಆಗಿದೆ. ಈಗ 63 ಸಕ್ರೀಯ ಪ್ರಕರಣಗಳಿವೆ. ಇವುಗಳಲ್ಲಿ 49 ಮಂದಿ ಹೋಮ್ ಐಸೋಲೇಷನ್ನಲ್ಲಿ ಹಾಗೂ ಉಳಿದ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲೂ ನಾಲ್ವರು ಐಸಿಯುನಲ್ಲಿ ಹಾಗೂ ಉಳಿದ 10 ಮಂದಿ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಮಾರ್ಚ್ನಿಂದ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ಸಿಗುವ ಸಾಧ್ಯತೆ:
ವ್ಯಾಕ್ಸಿನೇಷನ್ ಇನ್ನು ಸಂಪೂರ್ಣವಾಗಿ ಆಗಿಲ್ಲ. ಆದರೆ ಹೆಚ್ಚಿನ ಮಂದಿ ಆರೋಗ್ಯ ಇಲಾಖೆ ಪೋರ್ಟಲ್ ನಲ್ಲಿ ರಿಜಿಸ್ಟರ್ ಆಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಲಸಿಕೆ ಪಡೆದು ಕೊಳ್ಳದಿರುವವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸಾವಿನ ಪ್ರಮಾಣವನ್ನು ಗಮನಿಸಿದಾಗ 50 ವರ್ಷ ಮೇಲ್ಪಟ್ಟ ವರೇ ಕೊರೋನಾಕ್ಕೆ ತುತ್ತಾಗಿದ್ದಾರೆ ಮತ್ತು ಬಲಿಯಾದವರಲ್ಲಿ ಅವರ ಪ್ರಮಾಣವೇ ಹೆಚ್ಚಿದೆ.
ಆದ್ದರಿಂದ ಮಾರ್ಚ್ ಮೊದಲ ವಾರದಿಂದಲೇ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್ ವಿರುದ್ಧದ ಕೊವಿಶೀಲ್ಡ್ ವ್ಯಾಕ್ಸಿನ್ ನೀಡುವ ಸಾಧ್ಯತೆ ಇದೆ ಎಂದು ಡಾ. ಸುಧೀರ್ ಸೂಡ ಮಾಹಿತಿ ನೀಡಿದರು.
ಇದೇ ವರ್ಷದ ಜನವರಿ 16ರಂದು ಮೊದಲ ಹಂತದಲ್ಲಿ ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು ಈವರೆಗೆ 23,889 ಮಂದಿಯಲ್ಲಿ 17,339 (ಶೇ.72.6) ಮೊದಲ ಸುತ್ತಿನಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ.
ಎರಡನೇ ಡೋಸನ್ನು ಈವರೆಗೆ 7287 ಮಂದಿ ಪಡೆದಿದ್ದಾರೆ. ಇನ್ನು ಎರಡನೇ ಸುತ್ತಿನಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತಿದ್ದು ಒಟ್ಟು 4283 ಮಂದಿಯಲ್ಲಿ ಶೇ. 65.9ರಷ್ಟು ಮಂದಿ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 189 ಮಂದಿ ಕೊರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಇವರಲ್ಲಿ 138 ಮಂದಿ ಪುರುಷರಾಗಿದ್ದರೆ 51 ಮಂದಿ ಮಹಿಳೆಯರು 11ರಿಂದ 60ವರ್ಷದೊಳಗಿನ ಶೇ.38 ಹಾಗೂ ಶೇ.62ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರು ಬಲಿಯಾಗಿದ್ದಾರೆ.
ತಾಲೂಕುವಾರು ನೋಡುವಾಗ ಉಡುಪಿ ತಾಲೂಕಿನಲ್ಲಿ ಅತ್ಯಧಿಕ 61 ಮಂದ, ಕಾರ್ಕಳ ತಾಲೂಕಿನಲ್ಲಿ 33, ಬ್ರಹ್ಮಾವರ ತಾಲೂಕಿನಲ್ಲಿ 27, ಕುಂದಾಪುರ ತಾಲೂಕಿನ 26, ಕಾಪು 19, ಬೈಂದೂರು 18 ಹಾಗೂ ಹೆಬ್ರಿ ತಾಲೂಕಿನ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ದಾವಣಗೆರೆ ಹಾಗೂ ಉತ್ತರಕನ್ನಡದ ತಲಾ ಒಬ್ಬರು ಇಲ್ಲಿ ಮೃತಪಟ್ಟವರಲ್ಲಿ ಸೇರಿದ್ದಾರೆ.
ಪ್ರಾಯದ ಲೆಕ್ಕಾಚಾರ ದಲ್ಲಿ ನೋಡುವಾಗ 80 ವರ್ಷ ಮೇಲ್ಪಟ್ಟವರು 19, 718 ಮಂದಿ 80 ವರ್ಷದವರು 38, 61ರಿಂದ 70-59, 51ರಿಂದ 60-38 ಮಂದಿ, 41ರಿಂದ 50 24 ಮಂದಿ, 31ರಿಂದ 40-7, 21ರಿಂದ 30 ಹಾಗೂ 11ರಿಂದ 20 ವಯಸ್ಸಿನವರು, ತಲಾ ಇಬ್ಬರು ಮೃತಪಟ್ಟಿದ್ದಾರೆ.
ಕೊರೋನಾ ಬಂದ ನಂತರ ಅನೇಕ ಅಗತ್ಯ ಸಿಬ್ಬಂದಿ ಗಳನ್ನು ನಿಯೋಜನೆ ಮಾಡಲಾಗಿದೆ. ಐಸಿಯು, ವೆಂಟಿಲೇಟರ್ಸ್ ಸೌಲಭ್ಯ ಗಳನ್ನು ಹೆಚ್ಚಳ ಮಾಡಲಾಗಿದೆ. ಎಎನ್ ಎಮ್ ವಿಭಾಗದಲ್ಲಿ 18 ಹುದ್ದೆಗಳು ಭರ್ತಿಯಾಗಬೇಕಿದೆ. ಗ್ರೂಪ್ ಡಿ ಹುದ್ದೆಯಲ್ಲು ಇನ್ನು ಖಾಲಿಯಿದೆ. ಅದೇನೆ ಇದ್ದರೂ, ಕೋವಿಡ್ ಸೋಂಕಿತರು ಉದ್ವೇಗಕ್ಕೆ ಒಳಗಾಗಬಾರದು. ಸಕಾರಾತ್ಮಕವಾಗಿರಬೇಕು ಮತ್ತು ಅವರವರ ಜಾಗ್ರತೆಯಲ್ಲಿರಬೇಕು ಎಂದು ಕಿವಿ ಮಾತನ್ನು ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಡಾ. ಪ್ರೇಮಾನಂದರು ಉಪಸ್ಥಿತರಿದ್ದರು.