ಮಂಗಳೂರು, ಫೆ. 25 (DaijiworldNews/HR): "ನಮ್ಮ ನಡುವೆ ಹಲವಾರು ಜನರು ಜೀವನವನ್ನೇ ಸಾಹಿತ್ಯವಾಗಿ ಪರಿವರ್ತಿಸುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ನನ್ನ ಅಜ್ಜ ತನ್ನ ಕೈಯಲ್ಲಿ ಪೆನ್ನು ಹಿಡಿದರೆಂದರೆ ತನ್ನ ಹಳ್ಳಿಯ ಜೀವನವನ್ನು ಸುಂದರವಾಗಿ ಬರೆಯುತ್ತಿದ್ದರು. ನನ್ನ ಅಜ್ಜ ಹೇಳುವ ಈ ಕಥೆಗಳು ಮತ್ತು ಘಟನೆಗಳನ್ನು ಬರೆದಿಟ್ಟುಕೊಳ್ಳಲು ನಾನು ಆಸಕ್ತಿ ವಹಿಸಿರಲಿಲ್ಲ, ಹಾಗಾಗಿ ಅದು ನಮ್ಮ ಸಾಹಿತ್ಯಕ್ಕೆ ನಷ್ಟವಾಗಿದೆ" ಎಂದು ಕೊಂಕಣಿ ಕವಿ, ಉದ್ಯಮಿ ಟೈಟಸ್ ನೊರೊನ್ಹಾ ಹೇಳಿದ್ದಾರೆ.





































ಕೊಂಕಣಿ ಕಾವ್ಯದ ಹಿರಿಮೆಗಾಗಿ ಕವಿತಾ ಟ್ರಸ್ಟ್ ವಾರ್ಷಿಕವಾಗಿ ಆಚರಿಸುವ ಕಾವ್ಯ ಹಬ್ಬ ಕವಿತಾ ಫೆಸ್ತ್ ಇದರ 15 ನೇ ಆವೃತ್ತಿಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ಕೊಂಕಣಿ ಕಾವ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕವಿ, ಪತ್ರಕರ್ತ ಮೌರಿಸ್ ಡೆಸಾ, ಶಾಂತಿಪುರ ಇವರಿಗೆ ಮತಾಯಸ್ ಕುಟುಂಬ ಕೊಡಮಾಡುವ, 25000 ರೂಪಾಯಿ ನಗದು ಒಳಗೊಂಡ ಕವಿತಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಮೌರಿಸ್ "ಸುಮಾರು ಮೂರುವರೆ ದಶಕಗಳ ಹಿಂದೆ ನಾವು ಕೊಂಕಣಿಯ ಧೀಮಂತ ಕವಿ ಚಾಫ್ರಾ ಡಿಕೋಸ್ತಾ ನೇತೃತ್ವದ ಜಾಗೆ ಕವಿ ತಂಡವು ಕಂಡ ಕನಸು, ಕವಿತಾ ಟ್ರಸ್ಟ್ ನೇತೃತ್ವದಲ್ಲಿ ಇಂದು ನನಸಾಗುವ ಬಗೆ ಕಂಡು ಸಂತೋಷವಾಗುತ್ತಿದೆ. ಈ ಪುರಸ್ಕಾರವು ನನ್ನ ಕವಿತ್ವಕ್ಕೆ ದೊರೆತ ಗೌರವವಾಗಿದ್ದು, ಅನಿವಾರ್ಯ ಕಾರಣಗಳಿಂದಾಗಿ ತಟಸ್ಥವಾಗಿದ್ದ
ನನ್ನೊಳಗಿನ ಕವಿಯನ್ನು ಮಗದೊಮ್ಮೆ ಬಡಿದೆಬ್ಬಿಸಿ ಕಾವ್ಯಕ್ಷೇತ್ರದಲ್ಲಿ ಶ್ರಮಿಸಲು ಪ್ರೇರೇಪಣೆ ಎಂದು ಹೇಳಿ ಹೊಸದಾಗಿ ರಚಿಸಿದ ಕವಿತೆಯನ್ನು ಓದಿದರು.
ವಿಮರ್ಶಕ ಹೆನ್ರಿ ಮೆಂಡೊನ್ಹಾ ಬರೆದ ಕೊಂಕಣಿ ಕಾವ್ಯೆ : ರುಪಾಂ ಆನಿ ರೂಪಕಾಂ ಪುಸ್ತಕವನ್ನು ಬಸ್ತಿ ವಾಮನ್ ಶೆಣೈ ಬಿಡುಗಡೆಗೊಳಿಸಿದರು.
ಮಕ್ಕಳಿಗೆ, ಯುವಜನರಿಗೆ ಹಾಗೂ ವಯಸ್ಕರಿಗೆ ನಡೆದ ಕವಿತಾ ವಾಚನ ಸ್ಪರ್ಧೆಯಲ್ಲಿ ವಿಜೇತರಿಗೆ ದುಬಾಯಿಯ ಉದ್ಯಮಿ ಜೊಸೆಫ್ ಮತಾಯಸ್ ಬಹುಮಾನ ವಿತರಣೆ ಮಾಡಿದರು. ಟ್ರಸ್ಟ್ ಸ್ಥಾಪಕ ಮೆಲ್ವಿನ್ ರೊಡ್ರಿಗಸ್ ಈ ಸ್ಪರ್ಧೆಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ಆಂಡ್ರ್ಯೂ ಡಿಕುನ್ಹಾ ಕವಿ ಪರಿಚಯ ಮಾಡಿ ಕೊಟ್ಟರು. ವಿಕ್ಟರ್ ಮತಾಯಸ್ ಸನ್ಮಾನ ಪತ್ರ ವಾಚಿಸಿದರು.