ಮಂಗಳೂರು, ಫೆ.26 (DaijiworldNews/HR): "ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಪಾಲಿಕೆ ಸಭೆಯಲ್ಲಿ ವಿಪಕ್ಷದ ಸದಸ್ಯರನ್ನು ಧ್ವನಿ ಎತ್ತದಂತೆ ಮಾಡುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮನಪಾ ಸದಸ್ಯರಾದ ವಿನಯ್ರಾಜ್ ಆರೋಪಿಸಿದ್ದಾರೆ


ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪರಿಸರ ಮಾಲಿನ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕ ಸ್ಮಾಟ್ ಸಿಟಿ ಕಾಮಗಾರಿ, ಅಮೃತ್ ಯೋಜನೆ, ನೀರಿನ ಬಿಲ್ನ ಅವಾಂತರ, ಸಮರ್ಪಕವಾಗಿ ಸಿಗದ ಟ್ರೇಡ್ ಲೈಸೆನ್ಸ್ ಮೂಲಕ ಕೋವಿಡ್ನಿಂದ ಆರ್ಥಿಕವಾಗಿ ಕಂಗೆಟ್ಟಿರುವ ಜನರನ್ನು ಮನಪಾ ಆಡಳಿತ ಮತ್ತಷ್ಟು ಕಂಗೆಡಿಸಿದೆ" ಎಂದರು.
ಇನ್ನು ಸ್ಮಾಟ್ ಸಿಟಿ ಕಾಮಗಾರಿ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಮಾತನಾಡಿದ ಅವರು, "ಕಾಮಗಾರಿಗೆ ತಡೆಯಾಜ್ಞೆಯನ್ನು ನ್ಯಾಯಾಲಯ ನೀಡಿದ್ದಲ್ಲ. ಬದಲಾಗಿ ನ್ಯಾಯಾಲಯ ಸ್ಮಾರ್ಟ್ ಸಿಟಿ ಕಾಮಗಾರಿಯ ತ್ಯಾಜ್ಯದ ವಿಲೇವಾರಿ ಕುರಿತಂತೆ ಕೇಳಿರುವ ಪ್ರಶ್ನೆಗೆ ಮನಪಾ ಆಯುಕ್ತರೇ ಅಂಡರ್ ಟೇಕಿಂಗ್ ನೀಡಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಇವರು ಮಾಡಿದ ತಪ್ಪಿಗೆ ಜನ ಅನುಭವಿಸುವಂತಾಗಿದೆ" ಎಂದು ಹೇಳಿದ್ದಾರೆ.