ಕೂಳೂರು, ಫೆ.26 (DaijiworldNews/HR): "ಕೂಳೂರು ಜಂಕ್ಷನ್ನಲ್ಲಿ ಅಗತ್ಯವಿಲ್ಲದಿದ್ದರೂ ಮೇಲ್ಸೇತುವೆ ಮಾಡಿ ವ್ಯಾಪಾರಿಗಳಿಗೆ ಹೊಡೆತ ನೀಡಿದ್ದು, ಇದೀಗ ಮತ್ತೆ ಹೆದ್ದಾರಿ ಇಲಾಖೆ ಅಗಲೀಕರಣಕ್ಕಾಗಿ ಸರ್ವೆ ನಡೆಸುತ್ತಿದ್ದು, ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ" ಎಂದು ಕೂಳೂರು ನಾಗರಿಕ ಸಮಿತಿಯ ಸಂಚಾಲಕ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಕೂಳೂರಿನಲ್ಲಿ ನಡೆದ ಸ್ಥಳೀಯ ವ್ಯಾಪರಸ್ಥರ ಸಭೆಯಲ್ಲಿ ಮಾತನಾಡಿದ ಅವರು, "ಈ ಹೆದ್ದಾರಿ ನಿರ್ಮಾಣ ಮಾಡಲು 10-15 ವರ್ಷ ತೆಗೆದುಕೊಂಡಿದ್ದಾರೆ.ಇನ್ನೊಂದೆಡೆ ಅವೈಜ್ಞಾನಿಕ ಕಾಮಗಾರಿಯಾಗಿದೆ.ಸಾವು ನೋವು ಹೆಚ್ಚಾಗಿದ್ದು, ಕಳೆದ ಬಾರಿ ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭ ಅರೆಬರೆ ಕಾಮಗಾರಿ ಹಾಗೆಯೇ ಬಿಟ್ಟು ತೆರಳಿದ್ದರು. ಹೆದ್ದಾರಿ ಎತ್ತರಿಸಿದ ಕಾರಣ ಮಳಿಗೆಗಳು ತಗ್ಗಾಗಿ ಮಳೆಗಾಲದಲ್ಲಿ ಕೃತಕ ನೆರೆಯ ಸಮಸ್ಯೆ ಉದ್ಭವಿಸಿತು. ರಸ್ತೆಯ ಮೇಲೆ ನೀರು ನಿಂತು ಕೊಳವಾಗುತ್ತಿದೆ. ತಾವಾಗಿ ಲಕ್ಷಾಂತರ ರೂ.ಖರ್ಚು ಮಾಡಿ ತಡೆಗೋಡೆ ದಂಡೆ ಕಟ್ಟಿ ವ್ಯಾಪಾರ ಮುಂದುವರಿಸಿದ್ದೇವೆ. ಇದೀಗ ಹೊಸ ಕೂಳೂರು ಸೇತುವೆ ಕಾಮಗಾರಿ ಇದಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಹೆದ್ದಾರಿ ಅಗಲೀಕರಣ ಮಾಡಲು ಇಲಾಖೆ ಮುಂದಾಗಿದೆ. ಮಾಹಿತಿ ಕೇಳಿದರೆ ನಿರ್ಲಕ್ಷಿಸುತ್ತಿದ್ದಾರೆ. ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಇಲ್ಲಿನ ವ್ಯಾಪಾರಿಗಳು,ಅಂಗಡಿದಾರರಿಗೆ ಮತ್ತೆ ಆಘಾತವುಂಟಾಗಿದ್ದು, ತಕ್ಷಣ ಸ್ಥಳೀಯರ ಸಭೆ ಕರೆದು ಸಮಗ್ರ ಮಾಹಿತಿ ನೀಡಬೇಕು" ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
"ಹೆದ್ದಾರಿ ಇಲಾಖೆಯ ಅಗಲೀಕರಣಕ್ಕೆ ಮುಂದಾಗಿದ್ದು, ನಮ್ಮ ಅಂಗಡಿ ಮುಂಭಾಗ ಅಗೆದರೆ ವ್ಯಾಪಾರ ನಡೆಸುವುದಾದರೂ ಹೇಗೆ ,ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಕೊಡಲಿ ಇಲ್ಲವೇ ಪರಿಹಾರ ಕೊಡುವಂತಾಗಬೇಕು" ಎಂದು ಪತ್ರಿಕಾ ವಿತರಕ ಮನೋಹರ ಶೆಟ್ಟಿ ಒತ್ತಾಯಿಸಿದರು.
ಇನ್ನು "ಕಳೆದ ಹಲವಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡಿ ಕುಟುಂಬ ಕಟ್ಟಿಕೊಂಡಿದ್ದೇವೆ. ಕಳೆದ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿ ಎತ್ತರವಾಗಿ ಪ್ರತೀ ವರ್ಷ ಅಂಗಡಿ ಒಳಗೆ ನೀರು ನುಗ್ಗಿ ಲಕ್ಷಾಂತರ ನಷ್ಟವಾಗುತ್ತಿದೆ. ಈ ಬಾರಿ ಮತ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಕೊರೊನಾವಹಾವಳಿಯಿಂದ ನಷ್ಟದಲ್ಲಿರುವ ನಮಗೆ ಮತ್ತೆ ಹೊಡೆತವಾಗಿದೆ.ನಮಗೆ ಬೇರೆ ಕಟ್ಟಡ ಕಟ್ಟಿ ಕೊಡಲಿ ಇಲ್ಲವೇ ಪರಿಹಾರ ಬೇಕು" ಎಂದು ವ್ಯಾಪಾರಸ್ಥ ಮಹಮ್ಮದ್ ಇಕ್ಬಾಲ್ ಆಗ್ರಹಿಸಿದರು.
ಸಭೆಯಲ್ಲಿ ಶ್ರೀಧರ್ ಪೂಜಾರಿ, ಮನೋಹರ್ ಶೆಟ್ಟಿ ,ವ್ಯಾಪಾರಿ ಜೆಸ್ಸಿಲ್ ,ವ್ಯಾಪಾರಿ ಹೋಟೆಲು ಉದ್ಯಮಿ ಪ್ರಮೋದ್ ಭಟ್, ಪ್ರಭಾಕರ್ ,ಅರ್ಪಿತ ಸ್ಟುಡಿಯೋ ಮಾಲಕ ಹೋಟೆಲ್ ಉದ್ಯಮಿ ಗಣೇಶ್,
ಮಹಮ್ಮದ್ ಇಕ್ಬಾಕ್, ಚಂದ್ರ ಶೆಟ್ಟಿ, ಜೀವನ್, ಮನೋಜ್ ಚಂದ್ರ ಶೆಟ್ಟಿ,ಅರುಣ್ ಶೆಟ್ಟಿ, ಲೂಯಿಸ್ ಡಿಸೋಜ ಮತ್ತಿತರರು ಉಪಸ್ತಿತರಿದ್ದರು.