ಮಂಗಳೂರು, ಫೆ.26 (DaijiworldNews/PY): "ಕರ್ನಾಟಕ ಜಾನಪದ ಪರಿಷತ್ ದ.ಕ ಜಿಲ್ಲಾ ಘಟಕದ ವತಿಯಿಂದ ಫೆ.28ರಂದು ನಗರದ ಪುರಭವನದಲ್ಲಿ ಕರಾವಳಿ ಜಾನಪದ ಜಾತ್ರೆ ನಡೆಯಲಿದೆ" ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ಸುವರ್ಣ ಹೇಳಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನೆಹರೂ ಮೈದಾನದಿಂದ ಟೌನ್ ಹಾಲ್ವರೆಗೆ ನಡೆಯಲಿರುವ ಕರಾವಳಿ ಜಾನಪದ ಜಾತ್ರೆ ಮೆರವಣಿಗೆಯನ್ನು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನದ ಉದ್ಘಾಟನೆಯನ್ನು ದ.ಕ ಜಿಲ್ಲಾಧಿಕಾರಿ ಡಾ.ಕೆವಿ.ರಾಜೇಂದ್ರ ಅವರು ಉದ್ಘಾಟಿಸಲಿದ್ದಾರೆ" ಎಂದು ತಿಳಿಸಿದರು.
"ಕಾರ್ಯಕ್ರಮವನ್ನು ಅರಣ್ಯ, ಕನ್ನಡ ಹಾಗೂ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಲಿದ್ದು, ಲಕ್ಷ್ಮೀಶ್ ಶೆಟ್ಟಿ ಅವರು ಬರೆದ ತುಳು ಲಿಪಿಯ ಪ್ರಪ್ರಥಮ ಕಾದಂಬರಿ ಮಾಧಿರ ಇದನ್ನು ಮುಜರಾಯಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಚಿವ ಎಸ್. ಅಂಗಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ನ ರಾಜ್ಯಾಧ್ಯಕ್ಷ ತಿಮ್ಮೇಗೌಡ ಐಎಎಸ್ ಅವರು ವಹಿಸಲಿದ್ದಾರೆ. ಶ್ರೀಮದ್ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿಯ ಶ್ರೀಪಾದಂಗಳ, ಶಾಸಕ ವೇದವ್ಯಾಸ ಕಾಮತ್, ಶಾಸಕ ಭರತ್ ವೈ ಶೆಟ್ಟಿ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಕೃಷ್ಣ. ಜೆ. ಪಾಲೆಮಾರ್, ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ್ ಆಳ್ವ, ಮುಂಬೈನ ಕರ್ನಾಟಕ ಜಾನಪದ ಪರಿಷತ್ನ ಅಧ್ಯಕ್ಷ ಆರ್.ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.
"ಕಾರ್ಯಕ್ರಮದ ನಂತರ ತುಳು ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಮಹೇಂದ್ರನಾಥ್ ಸಾಲೆತ್ತೂರು, ಕೆ.ಕೆ.ಪೇಜಾವರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಎಲ್ಲಾ ತಾಲೂಕುಗಳಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತುಳುನಾಡ ವೈಭವ ನಡೆಯಲಿದೆ" ಎಂದು ಹೇಳಿದರು.
"ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಘಟಕದ ಕರ್ನಾಟಕ ಜಾನಪದ ಪರಿಷತ್ನ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ನಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರದೀಪ್ ಪೈ, ಕ್ರೈಸ್ತ ಅಭಿವೃದ್ದಿ ನಿಗಮದ ಅಧ್ಯಕ್ಷ ಜೊಯ್ಲೋಸ್ ಡಿಸೋಜ ಹಾಗೂ ಇತರರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಪದ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕೊಡಿಯಾಲ್ಬೈಲ್, ಖಜಾಂಜಿ ತಾರನಾಥ್ ಶೆಟ್ಟಿ ಬೋಳಾರ್, ಅರುಣ್ ಉಳ್ಳಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.