ಮಂಗಳೂರು, ಫೆ.26 (DaijiworldNews/PY): ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸಿಬ್ಬಂದಿಗೆ ನಿರಂತರ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿ ಬರುತ್ತಿದೆ.

ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದೆ.
ಪಾಲಿಕೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಯಾಗಿ ಸುಮಾರು 15 ವರ್ಷಗಳಿಂದ ದುಡಿಯುತ್ತಿರುವ ಶಶಿಕಲಾ ಡಿ.ಎಸ್. ಅವರು ಮಾನಸಿಕ ಕಿರುಕುಳ ತಾಳಲಾರದೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ. ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಆರ್ ಗಣೇಶನ್ ಹಾಗೂ ಪಾಲಿಕೆಯ ನೀರು ಸರಬರಾಜು ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ನರೇಶ್ ಶೆಣೈ ಅವರ ವಿರುದ್ದ ಶಶಿಕಲಾ ಅವರು ದೂರು ನೀಡಿದ್ದಾರೆ.
ಆರ್.ಗಣೇಶನ್ ಅವರ ಬಗ್ಗೆ ಈ ಹಿಂದೆಯೂ ದೂರು ಕೇಳಿ ಬಂದಿದೆ. ಇಲ್ಲಿ ಈ ಹಿಂದೆ ಗುತ್ತಿಗೆ ಸಿಬ್ಬಂದಿಗಳಾಗಿ ದುಡಿಯುತ್ತಿದ್ದ ವಿದ್ಯಾ ಹಾಗೂ ದಿವ್ಯಾ ಎನ್ನುವವರು ಕೂಡಾ ಮಾಸಿಕ ಕಿರುಕುಳದ ಕಾರಣದಿಂದ ಬಿಟ್ಟು ಹೋಗಿದ್ದಾರೆ ಎಂದು ಶಶಿಕಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಣೇಶ್ ಅವರು ಸಿಬ್ಬಂದಿಗಳ ಎದುರು ಹೀಯಾಳಿಸುವುದು, ಬೈಯುವುದು, ಏಕವಚನದಲ್ಲಿ ಕರೆಯುವುದು ಮುಂತಾದ ಅವಮಾನಕರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇನ್ನೋರ್ವ ಎಂಜಿನಿಯರ್ ನರೇಶ್ ಶೆಣೈ ಸಾಥ್ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾನು ಕಾಂಟ್ರಾಕ್ಟ್ ಬೇಸಿಸ್ ಮೇಲೆ 11,632 ರೂ. ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದೇನೆ. ನನಗೆ ಈ ಕೆಲಸ ಬಿಟ್ಟರೆ ಈ ವೇಳೆ ಬೇರೆ ಕಡೆ ಕೆಲಸಕ್ಕೆ ಸೇರಲು ಅವಕಾಶ ಕಡಿಮೆ ಎಂದು ತಿಳಿಸಿದ್ದಾರೆ.