ಉಡುಪಿ, ಫೆ.26 (DaijiworldNews/PY): ನಗರವನ್ನು ಬಯಲು ಮುಕ್ತ ಶೌಚ ಮುಕ್ತ (ಒಡಿಎಫ್ ಪ್ಲಸ್) ಎಂದು ಘೋಷಿಸಲು ಆಕ್ಷೇಪ ವಿಚಾರವನ್ನು ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರಶ್ನೆ ಎತ್ತಿದಾಗ ಗಿರೀಶ್ ಅಂಚನ್, ಬನ್ನಂಜೆ ವಾರ್ಡನ ಸವಿತಾ ಹರೀಶ್ ರಾಮ್, ಸುಂದರ್ ಕಲ್ಮಾಡಿ, ವಿಜಯ ಕೊಡವೂರು ಆಕ್ಷೇಪವೆತ್ತಿದರು.






ವಲಸೆ ಕಾರ್ಮಿಕರು ನಗರ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಆಕ್ರಮ ವಾಸ್ತವ್ಯ ಕೂಡ ಹೆಚ್ಚುತ್ತಿದೆ. ಅವರಿಗೆ ಶೆಡ್ ಕಟ್ಟಿಕೊಟ್ಟ ಜಾಗದ ಮಾಲಕರು ಶೌಚಾಲಯವನ್ನು ಮಾಡುವುದಿಲ್ಲ. ಹಾಗಾಗಿ ಬೀಡಿನಗುಡ್ಡೆ, ಬನ್ನಂಜೆ ಪ್ರದೇಶದ ವಲಸಿಗರು ಬಯಲು ಶೌಚಕ್ಕೆ ಹೋಗುತ್ತಾರೆ. ಮೊದಲು ಈ ಸಮಸ್ಯೆಗೆ ತಕ್ಷಣ ಪರಿಹಾರ ನೀಡಿ ಎಂದು ನಗರಸಭಾದ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್, "ವಲಸೆ ಕಾರ್ಮಿಕರು ಜಿಲ್ಲೆಗೆ ಬೇಕು. ಜಾಗದ ಮಾಲಕರು ಅವರಿಗೆ ಮೂಲ ಸೌಕರ್ಯ ಕೊಡಬೇಕು. ಇನೈದು ದಿವಸದಲ್ಲಿ ಜಾಗದ ಮಾಲಕರ ಸಭೆ ಮಾಡುತ್ತೇವೆ. ಒಪ್ಪಿಕೊಳ್ಳದಿದ್ದರೆ ಎಚ್ಚರಿಕೆ ಕೊಡಲಾಗುತ್ತದೆ. ಎಷ್ಟು ಮನೆಗಳಿಗೆ ಶಾಚಾಲಯ ಇಲ್ಲ, ಸಾರ್ವಜನಿಕ ಶಚಾಲಯ ನಿರ್ಮಾಣದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದರು.
"ಉಡುಪಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಟ್ಟಡ ಮಾಲಕರು ಯಾವುದೇ ಸೆಟ್ ಬ್ಯಾಕ್ ಇಲ್ಲದೇ ಕಟ್ಟಡ ಕಟ್ಟುತ್ತಿರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ. ನಗರದಲ್ಲಿ ಫುಟ್ಪಾತ್ಗಳು ಮಾಯವಾಗಿದೆ. ಪಾರ್ಕಿಂಗ್ ಜಾಗವನ್ನು ಆಕ್ರಮಿಸಿಕೊಂಡು ಚಿಕ್ಕ-ಪುಟ್ಟ ಅಂಗಡಿಗಳು ತಲೆ ಎತ್ತಿವೆ. ಸಿಟಿ ಬಸ್ ಸ್ಟ್ಯಾಂಡ್ ಕೆಲವು ಒಳಗಿನ ದಾರಿಗಳಲ್ಲಿ ಫುಟ್ಪಾತ್ಗಳು ಇಲ್ಲವೇ ಇಲ್ಲ. ಹೀಗಾಗಿ ಫುಟ್ಪಾತ್, ಪಾರ್ಕಿಂಗ್ ಜಾಗದಲ್ಲಿ ಅನಧಿಕೃತ ಅಂಗಡಿಗಳು ಬಂದಿವೆ. ಇದನ್ನು ನಗರಸಭೆಯ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು" ಎಂದು ಕುಂಜಿಬೆಟ್ಟು ವಾರ್ಡ್ನ ಸದಸ್ಯ ಗಿರೀಶ್ ಅಂಚನ್ ಒತ್ತಾಯಿಸಿದರು.
"ಉಡುಪಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಹಾಗಾಗಿ ಎಲ್ಲೆಲ್ಲೆ ಮಾಂಸಹಾರದ ತಿನಿಸನ್ನು ಸಾರ್ವಜನಿಕವಾಗಿ ಬಿಸಾಡುತ್ತಾರೊ ಅವರ ಮೇಲು ಕ್ರಮ ಕೈಗೊಳ್ಳುತ್ತೇವೆ. ಅನಧಿಕೃತ ಬೀದಿ ಬದಿಯ ಗೂಡಂಗಡಿಗಳನ್ನು ತೆರವು ಗೊಳಿಸಲು ಅಥವಾ ನಿಶ್ಚಿತ ಸ್ಥಳ ಗುರುತು ಮಾಡಬೇಕು" ಸದಸ್ಯರು ಒತ್ತಾಯ ಮಾಡಿದರು.
"ಕಳೆದ 12 ವರ್ಷಗಳ ಇಂದ್ರಾಣಿ ಕಲುಷಿತ ನೀರಿನ ಸಮಸ್ಯೆ ಹೆಚ್ಚಗುತ್ತಲೇ ಇದೆ. ಕಳೆದ ಬಾರಿ ಸಭೆಯಲ್ಲೂ ಚರ್ಚೆ ನಡೆದಿತ್ತು. ಆದರೆ ಏನೂ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಪೈಪ್ ಪಾಸ್ ಆಗಿರುವುದರಿಂದ ಈಗ ಆ ಸಮಸ್ಯೆ ಉಲ್ಬಣಗೊಂಡಿದೆ. ಆಗಿನ ಸ್ಥಳೀಯ ದುರಾಡಳಿತದಿಂದಲೇ ಇದು ಸಮಸ್ಯೆಗೆ ಕಾರಣವಾಗಿದೆ. ಹಿಂದೆ ಇಂದ್ರಾಣಿಯ ಪವಿತ್ರ ನೀರು ಎಂದು ಕುಡಿಯುತ್ತಿದ್ದರು. ಈಗ ಯುಜಿಡಿಯ ಸಮಸ್ಯೆಯಿಂದ ಹತ್ತಿರದ ಬಾವಿಗಳು ಕಲುಷಿತವಾಗುತ್ತಿದೆ. ಆರೋಗ್ಯ ಹದಗೆಡುತ್ತಿದೆ. ಜನರೇ ಒಂದು ದಿನ ಇದರ ವಿರುದ್ದ ದಂಗೆ ಏಳುತ್ತಾರೆ. ಸರಿಯಾದ ಕ್ರಮವನ್ನು ತಕ್ಷಣ ಕೈಗೊಳ್ಳದಿದ್ದರೆ ಮುಂದಿನ ಸಭೆಗೆ ಅದೇ ಕಲುಷಿತ ನೀರಿನಿಂದ ಸ್ನಾನ ಮಾಡಿ ಬರುತ್ತೇನೆ" ಎಂದು ಕೌನ್ಸಿಲರ್ ವಿಜಯ ಕೊಡವೂರು ಎಚ್ಚರಿಕೆ ಕೊಟ್ಟರು.
ಕಲ್ಮಾಡಿಯ ಕೌನ್ಸಿಲರ್ ಸುಂದರ್ ಅವರು ಮಾತನಾಡಿ,"ಸುಮಾರು 30 ಮನೆಗಳಿಗೆ ಶೌಚಾಲಯಗಳಿಲ್ಲ. ಕೆಲವು ಮನೆಗಳಿಂದ ನೇರವಾಗಿ ಚರಂಡಿಗೆ ಸಂಪರ್ಕವನ್ನು ಕೊಟ್ಟಿದ್ದಾರೆ. ಇಂತಹ ಸಾಕಷ್ಟು ಅನಧಿಕೃತ ಯುಜಿಡಿ ಸಂಪರ್ಕ ಮಾಡಲಾಗಿದೆ. ಇದನ್ನು ತಕ್ಷಣಕ್ಕೆ ತಡೆಯದಿದ್ದರೆ, ಸ್ಥಿತಿ ನಿಯಂತ್ರಣ ತಪ್ಪುತ್ತದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ನಗರದಲ್ಲಿ ನಡೆಯುವ ಗಣರಾಜ್ಯೋತ್ಸವ ಕ್ರಮದ ಖರ್ಚನ್ನು ನಗರಸಭೆ ಭರಿಸುತ್ತಿತ್ತು. ಅದರಂತೆ ಈ ಬಾರಿಯೂ ಅದು ಅಜೆಂಡಾದಲ್ಲಿ ಬಂದಿತ್ತು, ಈ ಸಂದರ್ಭದಲ್ಲಿ ಸದಸ್ಯರು ಆಕ್ಷೇಪಿಸಿ ಅವಿಭಜಿತ ದ.ಕ ಜಿಲ್ಲೆ ಇದ್ದಾಗ ಬೆಳೆದು ಬಂದ ಪದ್ದತಿ. ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ನಗರಸಭೆ ಏಕೆ ವೆಚ್ಚ ಭರಿಸಬೇಕು? ಎಂದು ಪ್ರಶ್ನಿಸಿದರು. ಇದೊಂದು ಆರ್ಥಿಕ ಹೊರೆ. ಇನ್ನು ಮುಂದೆ ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ನಮ್ಮ ಕೊಡುಗೆ ಕೊಡಬಹುದೇ ವಿನಃ ಸಂಪೂರ್ಣ ವೆಚ್ಚ ಭರಿಸಬಾರದು ಎಂದು ನಿರ್ಣಯ ತೆಗೆದುಕೊಳ್ಳಲು ಅಧ್ಯಕ್ಷರನ್ನು ಸದಸ್ಯರುಗಳು ಆಗ್ರಹಿಸಿದರು.
ಕುಡಿಯುವ ನೀರಿಗೆ ತಾತ್ವಾರ ಇರುವಾಗ ಕಿನ್ನಿಮೂಲ್ಕಿ ವಾರ್ಡ್ನಲ್ಲಿ ನಗರಸಭೆಯ ಅಧಿಕಾರಿಗಳ ಗಮನಕ್ಕೆ ಒಂದು ಬಾವಿ ಪಕ್ಕ ಮತ್ತೊಂದು ಬಾವಿ ತೋಡಿರುವ ಬಗ್ಗೆ ಮತ್ತು ಸ್ಥಳೀಯರು ತಮ್ಮನ್ನೇ ಅದಕ್ಕೆ ಕಾರಣ ಮಾಡುತ್ತಿದ್ದಾರೆ ಎಂದು ಕಿನ್ನಿಮೂಲ್ಕಿಯ ವಾರ್ಡ್ನ ಅಮೃತಾ ಕೃಷ್ಣಮೂರ್ತಿ ಕಮಿಷನರ್ ಉದಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅದು ಅಜ್ಜರಕಾಡಿನ ಭುಜಂಗ್ ಪಾರ್ಕ್ನಲ್ಲಿ ಹೊಸ ಬಟರ್ ಪ್ಲೈ ಪಾರ್ಕ್ ಮಾಡುತ್ತಿರುವುದಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಮಾಡಿರುವ ಬಗ್ಗೆ ತಿಳಿದ ಮೇಲೆ, ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಇದ್ದು, ಈ ಪಾರ್ಕ್ ಮಾನ್ಯತೆ ಮೊದಲು ಕೊಡಬೇಕಾ? ಅಂತ ಸಭೆಯಲ್ಲಿ ಕಮಿಷನರ್ ಅನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ನಗರಸಭೆಯ ಉಪಾದ್ಯಕ್ಷೆ ಲಕ್ಷ್ಮಿ ಮಂಜು ಕೊಳ ಉಪಸ್ಥಿತರಿದ್ದರು.