ಮಂಗಳೂರು, ಫೆ.26 (DaijiworldNews/PY): "ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2018, 2019 ಹಾಗೂ 2020ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ಮಾರ್ಚ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ" ಎಂದು ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್ ತಿಳಿಸಿದರು.


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಸಚಿವ ಡಿ.ವಿ.ಸದಾನಂದ ಗೌಡ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್ ಅವರು ವಹಿಸಲಿದ್ದಾರೆ. ರಾಜ್ಯ ಮೀನುಗಾರಿಕಾ ಹಾಗೂ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಅವರು ಶುಭಾಶಂಸನೆ ಮಾಡಲಿದ್ದಾರೆ. ಕನ್ನಡ ಹಾಗೈ ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಸಿ.ಟಿ ರವಿ ಅವರು ಶುಶಾಶಯದ ನುಡಿಗಳನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ರಾಜ್ಯಸಭಾ ಸದಸ್ಯ ನಾರಾಯಣ ಕೆ, ಉದ್ಯಮಿ ಹಾಗೂ ಕಲಾ ಪೋಷಕ ಯಾದವ ಕೋಟ್ಯಾನ್ ಪೆರ್ಮುದೆ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ" ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018, 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 3 ಮಂದಿ ಹಿರಿಯರನ್ನು ಆಯ್ಕೆ ಮಾಡಲಾಗಿದೆ.
2018ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದಲ್ಲಿ ಲಲಿತಾ ಆರ್. ರೈ, ತುಳು ನಾಟಕ ಕ್ಷೇತ್ರದಲ್ಲಿ ರತ್ನಾಕರ ರಾವ್ ಕಾವೂರು ಹಾಗೂ ತುಳು ಸಿನಿಮಾ ಕ್ಷೇತ್ರದಲ್ಲಿ ಎ. ಕೆ ವಿಜಯ್ ಇವನ್ನು ಆಯ್ಕೆ ಮಾಡಲಾಗಿದೆ.
2019ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಸ್. ಆರ್. ವಿಘ್ನರಾಜ್, ತುಳು ಯಕ್ಷಗಾನ ಕ್ಷೇತ್ರ ದಿ. ತಿಮ್ಮಪ್ಪ ಗುಜರನ್ ತಲಕಳ, ತುಳು ಜಾನಪದ ಕ್ಷೇತ್ರ ಗುರುವ ಕೊರಗ, ಹಿರಿಯಡ್ಕ ಇವರನ್ನು ಆಯ್ಕೆ ಮಾಡಲಾಗಿದೆ.
2020ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರ ರಾಮಚಂದರ್ ಬೈಕಂಪಾಡಿ, ತುಳು ನಾಟಕ ಕ್ಷೇತ್ರ ತುಂಗಪ್ಪ ಬಂಗೇರ ಪೂಂಜಾಲಕಟ್ಟೆ, ತುಳು ಜಾನಪದ ಕ್ಷೇತ್ರ ಆನಂದ ಪೂಜಾರಿ, ಹಳೆಯಂಗಡಿ ಇವರನ್ನು ಆಯಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಜೀವಮಾನದ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಪ್ರಶಸ್ತಿಗಾಗಿ 3 ವಿಭಾಗಗಳ ತಲಾ ಒಂದು ಪುಸ್ತಕವನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಲಾಗಿದೆ.
ಕವನ ಸಂಕಲನ ವಿಭಾಗದಲ್ಲಿ ಶಾಂತಾರಾಮ್ ವಿ. ಶೆಟ್ಟಿ ಅವರ ‘ಮಣ್ಣ ಬಾಜನೊ’ ಹಾಗೂ ಕಾದಂಬರಿ ವಿಭಾಗದಲ್ಲಿ ರಾಜಶ್ರೀ ಟಿ. ರೈ ಪೆರ್ಲ ಅವರ ‘ಕೊಂಬು’ ಕೃತಿಯನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಕವನ ಸಂಕಲನ ವಿಭಾಗದಲ್ಲಿ ಕುಶಾಲಾಕ್ಷಿ ವಿ. ಕುಲಾಲ್, ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ಕೃತಿಯನ್ನು ಆಯ್ಕೆ ಮಾಡಲಾಗಿದೆ.
2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಲ್ಲಿ ಕವನ ಸಂಕಲನ ವಿಭಾಗದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಅವರ ‘ಕೆಲೆಪು ಪೆರಡೆ ಕೆಲೆಪು’ಕೃತಿಯನ್ನು ಆಯ್ಕೆ ಮಾಡಲಾಗಿದೆ.
2018, 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿಯು ರೂ.50,000 ನಗದು, ಪ್ರಶಸ್ತಿ ಪತ್ರ, ಸ್ಮರಣೆಕೆ ಹಾಗೂ ಪುಸ್ತಕ ಬಹುಮಾನಕ್ಕೆ ರೂ.25,000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 7ರ ರವಿವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ಜರುಗಲಿದೆ.
2020ನೇ ಸಾಲಿನ ವಿಶೇಷ ಬಾಲ ಪ್ರತಿಭೆ, ಯುವ ಸಾಧಕ ಹಾಗೂ ಸಂಘಟನಾ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.
ತನುಶ್ರೀ ಪಿತ್ರೋಡಿ (ಯೋಗ), ಸನ್ನಿಧಿ ಟಿ ರೈ ಪೆರ್ಲ (ಕಲಾ ಕ್ಷೇತ್ರ), ತಕ್ಷಿಲ್ ದೇವಾಡಿಗ ( ಜಾನಪದ ಕ್ಷೇತ್ರ) ಇವರನ್ನು ಬಾಲ ಪ್ರತಿಭೆ 2020 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯೋಗೀಶ್ ಶೆಟ್ಟಿ ಜೆಪ್ಪು, ನವೀನ್ ಶೆಟ್ಟಿ ಎಡ್ಮೆಮಾರ್, ರಮೇಶ್ ಪಿ ಮೆಟ್ಟಿನಡ್ಕ, ನಾಗರಾಜ್ ಭಟ್ ಬಂಟ್ವಾಳ, ಭರತ್ ಸೌಂದರ್ಯ ಬೆಂಗಳೂರು, ಸುಭಾಸ್ ನಾಯಕ್ ಬಂಟಕಲ್, ದೀಪಕ್ ಪಡುಕೋಣೆ ಇವರನ್ನು ಯುವ ಪ್ರತಿಭೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ತುಳು ಕೂಟ ಕುವೈಟ್ (ಹೊರದೇಶ), ತುಳು ಸಂಘ ಬರೋಡ (ಹೊರ ರಾಜ್ಯ), ಬೆಂಗಳೂರು ತುಳು ಕೂಟ ಬೆಂಗಳೂರು (ಹೊರ ಜಿಲ್ಲೆ), ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು-ಹಳೆಯಂಗಡಿ (ದ.ಕ), ತುಳು ಕೂಟ ಉಡುಪಿ (ಉಡುಪಿ) ಸಂಘಟನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜೇಶ್ ಜಿ, ಕಡಬಾ ದಿನೇಶ್ ರೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.