ಉಡುಪಿ, ಫೆ. 26 (DaijiworldNews/SM): ರಾಜ್ಯದಲ್ಲಿ 2 ಕೋಟಿಗೂ ಅಧಿಕ ಯುವಕರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಯುವಪ್ರತಿಭೆಗಳ ಕಲೆಯನ್ನು ಗುರುತಿಸಿ, ಅವರ ಪ್ರತಿಭೆಯನ್ನು ದೇಶ-ವಿದೇಶಗಳಲ್ಲಿಯೂ ಮೆರಗು ಮೂಡಿಸುವಂತೆ ಮಾಡುವ ನಿಟ್ಟಿನಲ್ಲಿ, ರಾಜ್ಯದಲ್ಲಿ ಯುವಕರನ್ನು ಪ್ರೋತ್ಸಾಹಿಸುವಂತಹ ಯೋಜನೆಗಳನ್ನು ತರಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ಹೇಳಿದರು.

ಅವರು ಶುಕ್ರವಾರ ಮಟ್ಟಾರುವಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ 3.29 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾದನೆ ತೋರುವ ಯುವಕರಿಗೆ ಅಗತ್ಯ ತರಬೇತಿ, ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು. ಯುವಕರ ಹೊಸ ಪ್ರತಿಭೆಯನ್ನು ಅನಾವರಣಗೋಳಿಸಲು ಸುಸಜ್ಜಿತ ವೇದಿಕೆ ಕಲ್ಪಿಸಲಾಗುವುದು. ಕರಾವಳಿ ಭಾಗದ ಜನತೆಯು ಕಲೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ ಎಂದು ಸಚಿವರು ಹೇಳಿದರು.
ಕೋವಿಡ್ ಎರಡನೇ ಅಲೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಸಭೆ, ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಚಿವ ಡಾ.ಕೆ.ಸಿ. ನಾರಾಯಣಗೌಡ ಹೇಳಿದರು.