ಮಂಗಳೂರು, ಜೂ17: ಕೇಂದ್ರ ಸರಕಾರವೂ ಲೋಕಸಭೆ ಚುನಾವಣೆ ಸಮೀಸುತ್ತಿರುವಂತೆಯೇ ಗಿಮಿಕ್ ಮಾಡುತ್ತಿದೆ ಹೊರತು ಸಮರ್ಥವಾಗಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ಸೋತಿದೆ, ಎಂದು ಕೇಂದ್ರ ಸರಕಾರದ ಆಡಳಿತ ವಿರುದ್ಧ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ, ಬಿಜೆಪಿ ತನ್ನ ಸಾಧನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಬ್ಯಾನರ್ , ಹೋರ್ಡಿಂಗ್ಸ್ ಹಾಕುವುದರಲ್ಲೇ ಸಮಯ ಕಳೆಯುತ್ತಿದೆ. ಅವರು ಜಾರಿಗೆ ತಂದ ಜನ ಧನ್ ಯೋಜನೆಯೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಾರೆ ಆದರೆ ಜನಧನ್ ಹೆಸರಿನಲ್ಲಿ ಜನರು ಬ್ಯಾಂಕ್ ಖಾತೆ ತೆರೆದು ಬ್ಯಾಂಕ್ಗೆ ದುಡ್ಡು ಜಮಾ ಆಗಿದೆಯೇ ಹೊರತು ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿನಿತ್ಯದಂತೆ ಏರಿಕೆಯಾಗುತ್ತಿದೆ. ಇದರಿಂದ ಮುಚ್ಚಿದ್ದ ರಿಲಾಯನ್ಸ್ ಕಂಪನಿ ಮತ್ತೆ ತೆರೆಯುವಂತಾಗಿದೆ. ಅಡುಗೆ ಅನಿಲ ಯುಪಿಎ ಸರಕಾರದಲ್ಲಿ 400 ರೂ.ಗಳಿದ್ದು, ಎನ್ಡಿಎ ಸರಕಾರದಲ್ಲಿ 800 ರೂ.ಗಳಿಗೆ ಏರಿಕೆಯಾಗಿದೆ. ಕಪ್ಪು ಹಣ ನಿಗ್ರಹಕ್ಕಾಗಿ ನೋಟು ಅಮಾನ್ಯೀಕರಣಗೊಳಿಸಿದರು. ವಿದೇಶದಲ್ಲಿ ಕಪ್ಪು ಹಣ ಇದೆ ಅದನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಹೇಳಿದ್ದರು. ಯುಪಿಎ ಅವಧಿಯಲ್ಲಿ ಶೇ. 44ರಷ್ಟಿದ್ದ ಕಪ್ಪು ಹಣದ ಪ್ರಮಾಣ ಇದೀಗ ಶೇ. 88ಕ್ಕೇರಿದೆ. ಇದೀಗ ಎಲ್ಲರ ಖಾತೆಗೆ 30 ಲಕ್ಷ ರೂ. ಹಣ ಜಮಾ ಆಗಲಿದೆ ಎಂದು ಮಾಜಿ ಸಚಿವ ರೈ ವ್ಯಂಗ್ಯವಾಡಿದರು.
ಯುಪಿಎ ಸರ್ಕಾರವೂ ರೈತರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಿತ್ತು. ಆದರೆ ಎನ್ಡಿಎ ಸರಕಾರ ರೈತರ ಸಾಲ ಮನ್ನಾದ ಬಗ್ಗೆ ಮೌನ ವಹಿಸಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ನ ಅನೇಕ ನಾಯಕರು ಬೇಲ್ ಗಾಡಿಗಳು ಎಂಬುದಾಗಿ ಜನರಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷ ಯಡಿಯೂರಪ್ಪ ಸಹಿತ ಎಲ್ಲರೂ ಬೇಲ್ ಗಾಡಿಗಳೇ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ನ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಹನೀಫ್ , ಮುಂತಾದವರು ಉಪಸ್ಥಿತರಿದ್ದರು.