ಸುಳ್ಯ, ಜು 17: ಸುಳ್ಯ ನಗರ ಪಂಚಾಯತ್ ಕಳೆದ 6 ತಿಂಗಳಿನಿಂದ ಸಭೆ ಸೇರಿಲ್ಲ. ಯಾವುದೇ ಅಭಿವೃದ್ದಿ ಕಾಮಗಾರಿಗಳು ನಡೆಯದೆ ನೆನೆಗುದಿಗೆ ಬಿದ್ದಿದೆ. ಕ್ರೀಯಾ ಯೋಜನೆಗಳು ನಡೆಯುತ್ತಿಲ್ಲ. ನಗರಾಡಳಿತ ಸಂಪೂರ್ಣ ಕುಸಿದು ಕೋಮಾ ವ್ಯವಸ್ಥೆ ತಲುಪಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಹೇಳಿದರು.
ಅವರು ಸುಳ್ಯ ನಗರ ಪಂಚಾಯತ್ನ ದುರಾಡಳಿತ ಮತ್ತು ಕೆವಿಜಿ ವೃತ್ತದ ಬಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಘಟಕದ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಆಡಳಿತ ನಡೆಸಲು ಬಿಜೆಪಿಯವರಿಗೆ ಗೊತ್ತಿಲ್ಲ. ನಗರದಲ್ಲಿ ನೂರಾರು ಸಮಸ್ಯೆಗಳಿದ್ದರೂ ಅದನ್ನು ಸರಿಪಡಿಸಲು ಆಗದ ನಗರಾಡಳಿತ ವಿಫಲವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಹೋಗುವ ಈ ರಸ್ತೆಗೆ ಇಂಟರ್ಲಾಕ್ ಅಳವಡಿಸಿದ್ದಾರೆ. ಇದು ಮೂರ್ಖತನ. ಯಾವ ರಸ್ತೆಗೆ ಯಾವ ರೀತಿಯಲ್ಲಿ ಕೆಲಸ ನಡೆಯಬೇಕು ಎನ್ನುವುದನ್ನು ಅಲ್ಲಿಯ ಇಂಜಿನಿಯರ್ ತಿಳಿಸಿಕೊಡಬೇಕು. ಒಂದು ವೇಳೆ ಅವರು ಮಾಡಿದ್ದಾರೆಂದರೆ ಸದಸ್ಯರಾದರೂ ಕೆಲಸ ಆಗುತ್ತಿರುವಾಗ ಇದು ಸರಿಯಾದ ಕ್ರಮ ಅಲ್ಲವೆಂದು ಹೇಳಬೇಕು ಎಂದು ಹೇಳಿದರು.
ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ, ಸುಳ್ಯ ನಗರ ಪಂಚಾಯತ್ ಆಡಳಿತ ನಡೆಸಲು ವಿಫಲವಾಗಿದೆ. ತಿಂಗಳಲ್ಲಿ ಒಂದು ಸಭೆ ಕರೆಯಬೇಕಾದ ಆಡಳಿತ 6 ತಿಂಗಳು ಕಳೆದರೂ ಸಭೆ ನಡೆಸಿಲ್ಲ. ಕ್ರೀಯಾ ಯೋಜನೆಗಳನ್ನು ಮಾಡದೇ ಅಭಿವೃದ್ದಿ ಕಾಮಗಾರಿ ಕುಂಠಿತಗೊಂಡಿದೆ. ಈ ರಸ್ತೆಗೆ ಹಿಂದೆ ಇಂಟರ್ಲಾಕ್ ಅಳವಡಿಸುವಾಗ ಇದು ಇಲ್ಲಿಗೆ ಆಗಿ ಬರುವುದಿಲ್ಲ ಎಂದು ನಾನೇ ನ.ಪಂ.ನವರನ್ನು ಎಚ್ಚರಿಸಿದ್ದೆ ನಾಲ್ಕು ವರ್ಷದಲ್ಲಿ 2 ಬಾರಿ ಒಂದು ರಸ್ತೆಗೆ ಇಂಟರ್ಲಾಕ್ನ್ನು ನಗರಾಡಳಿತ ಹಾಕುತ್ತದೆ ಎಂದಾದರೆ ಅಲ್ಲಿ ೫೦ ಪರ್ಸೆಂಟ್ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನ.ಪಂ. ಸದಸ್ಯರಾದ ಗೋಕುಲ್ದಾಸ್, ಕೆ.ಎಂ.ಮುಸ್ತಫಾ, ಶಿವಕುಮಾರ್ ಕಂದಡ್ಕ, ಶ್ರೀಮತಿ ಶ್ರೀಲತಾ ಪ್ರಸನ್ನ, ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ, ಶರೀಫ್ ಕಂಠಿ, ಸತ್ಯಕುಮಾರ್ ಆಡಿಂಜ, ಡೇವಿಡ್ ಧಿರಾ ಕ್ರಾಸ್ತಾ, ಆರ್.ಕ. ಮಹಮ್ಮದ್, ಕೆ.ಕೆ.ಹರಿಪ್ರಸಾದ್, ರಾಧಾಕೃಷ್ಣ ಪರಿವಾರಕಾನ, ನಂದರಾಜ ಸಂಕೇಶ, ಸುರೇಶ್ ಅಮೈ, ತಿರುಮಲೇಶ್ವರಿ ಜಾಲ್ಸೂರು, ಸುಜಯ ಕೃಷ್ಣ, ಭವಾನಿಶಂಕರ ಕಲ್ಮಡ್ಕ, ಬೀರಾಮೊದೀನ್ ಕನಕಮಜಲು, ಪವಾಝ್ ಕನಕಮಜಲು, ಶಾಫಿ ಕುತ್ತಮೊಟ್ಟೆ, ಹಮೀದ್ ಬಜಕೊಚ್ಚಿ ರಫೀಕ್ ಪಡು, ಪಿ.ಎಸ್.ಗಂಗಾಧರ್, ಅಶೋಕ್ ನೆಕ್ರಾಜೆ, ಲಕ್ಷ್ಮಣ ಶೆಣೈ, ನಾರಾಯಣ ಟೈಲರ್ ದುಗಲಡ್ಕ, ಶಿಲ್ಪಾ ಇಬ್ರಾಹಿಂ, ಸುಧೀರ್ ರೈ ಮೇನಾಲ, ಮಿಥುನ್ ಕರ್ಲಪ್ಪಾಡಿ, ಶಹೀದ್ ಪಾರೆ, ಶೌವಾದ್ ಗೂನಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ನಾರಾಯಣ ಜಟ್ಟಿಪಳ್ಳ, ಗಣಪ ಸಾಲ್ಯಾನ್ ಮೊದಲಾದವರಿದ್ದರು.