ಬಂಟ್ವಾಳ, ಜು 17: ಬಿ.ಸಿ.ರೋಡ್ನಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಕಟ್ಟಡಗಳಿಗೆ ಪರಿಹಾರ ನೀಡಿಯೂ ಇನ್ನೂ ತೆರವುಗೊಳಿಸದಿರುವುದು ಕಂಡು ಬಂದಿದ್ದು, ತಕ್ಷಣವೇ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಕಚೇರಿಯಲ್ಲಿ ಮಂಗಳವಾರ ಕರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ,ಪರಿಹಾರ ನೀಡಿಯೂ ಯಾಕೆ? ತೆರವುಗೊಳಿಸಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಡಿಸಿ ನೇತೃತ್ವದಲ್ಲಿ ಸಭೆ ನಡೆಸಿ, ಈ ಬಗ್ಗೆ ಸೂಕ್ತಕ್ರಮಕೈಗೊಳ್ಳಲಾಗುವುದು ಸಂಸದರು ಭರವಸೆ ನೀಡಿದರು.
ಅನಧಿಕೃತ ಪ್ರಯಾಣಿಕರ ತಂಗುದಾಣ ಹಾಗೂ ಬೋರ್ಡ್ಗಳು ಬಿಸಿ.ರೋಡ್ ಮುಖ್ಯ ರಸ್ತೆಯಲ್ಲಿ ಹಾಕಲಾಗಿದೆ. ಅಲ್ಲದೆ, ಬಿ.ಸಿ.ರೋಡ್ನಲ್ಲಿ ನಿರ್ಮಿಸಲಾಗಿರುವ ಸರ್ವೀಸ್ ರಸ್ತೆ ಅಪೂರ್ಣವಾಗಿದ್ದು, ಊಟಕ್ಕಿಲ್ಲದ ಉಪ್ಪಿಕಾಯಿಯಂತಾಗಿದೆ. ಒಳಚಂರಡಿ ಸಂಪರ್ಕವಿಲ್ಲದೆ, ಮಳೆ ನೀರು ರಸ್ತೆಯಲ್ಲಿ ನಿಲ್ಲುವಂತಾಗಿದೆ ಎಂದು ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ದೂರಿಕೊಂಡರು.
ಮೆಲ್ಕಾರ್ ರಸ್ತೆ, ಕಲ್ಲಡ್ಕ ಕಾಮಗಾರಿ, ತುಂಬೆ ತಿರುವು ರಸ್ತೆ ಹಾಗೂ ಒಳಚರಂಡಿ, ಬಿ.ಸಿ.ರೋಡ್-ಮುಕ್ಕ ರಸ್ತೆಯ ಬಗ್ಗೆ ದೂರುಗಳು ಸಭೆಯಲ್ಲಿ ಕೇಳಿಬಂದವು.
ಬ್ರಹ್ಮರಕೂಟ್ಲು ಟೋಲ್ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ 15 ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಬ್ರಹ್ಮರಕೂಟ್ಲು ಟೋಲ್ ಬಂದ್ ಮಾಡಿ ಪ್ರತಿಭಟನೆ ಮಾಡಗುವುದು ಸ್ಥಳೀಯರು ಎಚ್ಚರಿಸಿ, ಸಂಸದರಿಗೆ ಮನವಿ ಸಲ್ಲಿಸಿದರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಮಾತನಾಡಿ, ಅಧಿಕಾರಿಗಳಿಗೆ ಸಲಹೆ ನೀಡಿದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಪಂಸದಸ್ಯ ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ,
ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ಎಲ್ಆಂಡ್ಟಿ ಸಂಸ್ಥೆಯ ಅಧಿಕಾರಿಗಳು ಇದ್ದರು.