ಮಂಗಳೂರು, ಫೆ.27 (DaijiworldNews/MB) : ''ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶವಿದೆ'' ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ ಅವರು ಶನಿವಾರ ಹೇಳಿದರು.


ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಂಗಳೂರು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದ ಕೇಂದ್ರವಾಗಿದೆ. ರಾಜ್ಯಕ್ಕೆ ಉದ್ಯೋಗ ಮತ್ತು ಆದಾಯಕ್ಕೆ ಸಂಭಾವ್ಯ ಹಾದಿಯನ್ನು ಸುಗಮಗೊಳಿಸಲು ಮಂಗಳೂರಿನಲ್ಲಿ ವ್ಯಾಪಕ ಅವಕಾಶವಿದೆ" ಎಂದರು.
"ಮಂಗಳೂರನ್ನು ಆರೋಗ್ಯ ನಗರವನ್ನಾಗಿ ಪರಿವರ್ತಿಸುವ ಪ್ರಸ್ತಾಪವಿದೆ. ಮಂಗಳೂರಿನಲ್ಲಿ ಆರೋಗ್ಯ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ದೇವಾಲಯ ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶವಿದೆ" ಎಂದು ಹೇಳಿದರು.
''ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ತಮ್ಮ ಇಲಾಖೆ ಯೋಚಿಸುತ್ತಿದೆ. ಮಂಗಳೂರು ಬಂದರಿಗೆ ಕ್ರೂಸರ್ ಮೂಲಕ ಹಲವಾರು ವಿದೇಶಿ ಪ್ರವಾಸಿಗರು ಬರುತ್ತಾರೆ, ಆದರೆ ಸಂಪರ್ಕ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳಿಲ್ಲದ ಕಾರಣ, ಪ್ರವಾಸೋದ್ಯಮವು ಜನಪ್ರಿಯತೆಯನ್ನು ಗಳಿಸುವಲ್ಲಿ ವಿಫಲವಾಗಿದೆ. ಆದರೆ ಈ ರೀತಿಯ ಪ್ರವಾಸೋದ್ಯಮವು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ವಿದೇಶಿ ವಿನಿಮಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ" ಎಂದರು.
''ಪ್ರವಾಸಿಗರು ಐತಿಹಾಸಿಕ ಸ್ಥಳಗಳಿಗೆ ಸಮಯಕ್ಕೆ ತಲುಪಲು ಅನುಕೂಲವಾಗುವಂತೆ ಸಮುದ್ರ ಮಾರ್ಗದ ವೇಗದ ದೋಣಿ, ವಿಹಾರ ನೌಕೆ ಅಥವಾ ವೇಗದ ದೋಣಿ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವನೆಯನ್ನು ತಮ್ಮ ಇಲಾಖೆ ಕೇಂದ್ರ ಸರ್ಕಾರಕ್ಕೆ ನೀಡಲಿದೆ'' ಎಂದು ಸಚಿವರು ಹೇಳಿದರು. ''ಅಲ್ಲದೆ, ಜಿಲ್ಲೆಯು ಪಶ್ಚಿಮ ಘಟ್ಟದ ವಿಸ್ತಾರದಲ್ಲಿರುವುದರಿಂದ, ನದಿಗಳಲ್ಲಿ ಹಿನ್ನೀರಿನ ಕ್ರೀಡಾ ಚಟುವಟಿಕೆಗಳಿಗೆ ವ್ಯಾಪಕ ಅವಕಾಶವಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಇಲಾಖೆಯು ಈ ಬಗ್ಗೆ ಗಮನ ಹರಿಸಲಿದೆ'' ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿನ ನೀತಿಗಳನ್ನು ಸಡಿಲಿಸುವ ಮೂಲಕ ಸಿಆರ್ಝಡ್ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯೋಗೇಶ್ವರ ಭರವಸೆ ನೀಡಿದರು. ''ಇತರ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ವಿದೇಶಿಯರಿಗೆ ತೆರಿಗೆ ಹೆಚ್ಚು. ಆದ್ದರಿಂದ ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು'' ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತ ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.