ಮಂಗಳೂರು, ಫೆ.28 (DaijiworldNews/HR): "ಈ ಬಾರಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆಗೆ ಶೇ. 70ರಷ್ಟು ಪಠ್ಯಕ್ರಮ ಮಾತ್ರ ಇರಲಿದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಹೆತ್ತವರು ಎಸೆಸೆಲ್ಸಿ ಪರೀಕ್ಷೆ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲ. ಅಗತ್ಯವಾದ ಮುಂದಿನ ಶಿಕ್ಷಣಕ್ಕೆ ನಿರ್ಣಾಯಕವಾದ ಪಠ್ಯ ವಿಷಯಗಳನ್ನು ಪರೀಕ್ಷೆಗೆ ಇರಿಸಿರುವ ಶೇ. 70 ಭಾಗದಲ್ಲಿ ಸೇರಿಸಲಾಗಿದ್ದು, ಈ ವಿಚಾರವಾಗಿ ಕರ್ನಾಟಕದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ಪೋಷಕರ ಜತೆ ಈಗಾಗಲೇ ಚರ್ಚಿಸಿದ್ದೇನೆ" ಎಂದರು.
ಇನ್ನು "ಈ ಬಾರಿ ಕೊರೊನಾದಿಂದಾಗಿ ಹಲವು ಪೋಷಕರು ಶುಲ್ಕ ಪಾವತಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಈ ಸಮಸ್ಯೆಗೆ ಹೆತ್ತವರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯವರು ಪರಸ್ಪರ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕಿತ್ತು, ಇದು ನಡೆಯದ ಕಾರಣ ಸರಕಾರ ಶುಲ್ಕ ಕಡಿತದ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಶೇ. 30 ಶುಲ್ಕ ಕಡಿತಗೊಳಿಸಿರುವ ಸರಕಾರದ ನಿರ್ಧಾರದ ವಿರುದ್ಧ ಖಾಸಗಿ ಶಾಲೆಯವರು ನ್ಯಾಯಾಲಯಕ್ಕೆ ಹೋಗಿದ್ದು, ಶುಲ್ಕ ರಿಯಾಯಿತಿ ಸಂಬಂಧಿಸಿದ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಸೂತ್ರವೊಂದನ್ನು ಕಂಡು ಹಿಡಿಯುತ್ತೇವೆ" ಎಂದು ಹೇಳಿದ್ದಾರೆ.