ಕುಂದಾಪುರ, ಜು 17: ತಾಲೂಕು ಪಂಚಾಯತ್ ಕೆಡಿಪಿ ಸಭೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಆರೋಗ್ಯ ಇಲಾಖೆಯಲ್ಲಿನ ಸಮಸ್ಯೆಗಳು ಒಂದೊಂದಾಗಿ ತೆರದುಕೊಂಡವು.
ಕುಂದಾಪುರ ತಾಲೂಕಿನಲ್ಲಿ 108 ಅಂಬ್ಯುಲೆನ್ಸ್ ವಾಹನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬೈಂದೂರಿನಲ್ಲಿ ಕರೆ ಮಾಡಿದರೂ ಅಂಬ್ಯುಲೆನ್ಸ್ ಕಳುಹಿಸುವುದಿಲ್ಲ, ಕರ್ನಾಟಕ ಆರೋಗ್ಯ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಸರಕಾರಿ ಆಸ್ಪತ್ರೆಗಳು ನಿಧಾನಗತಿ ಅನುಸರಿಸುತ್ತಿದೆ ಇತ್ಯಾದಿ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಸರಕಾರಿ ಇಲಾಖೆಗಳು ಜನರ ಸೇವೆಗೆ ಇರಬೇಕು ಎಂದು ಸುಕುಮಾರ ಶೆಟ್ಟಿ ಹೇಳಿದರು. ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಜನರ ಆರೋಗ್ಯದ ಜೊತೆ ಆಟ ಆಡಬೇಡಿ ಎಂದು ಸುಕುಮಾರ ಶೆಟ್ಟಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ತಕ್ಷಣ ಆರಕ್ಷಕ ಅಧಿಕಾರಿಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾ.ಪಂ.ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.