ಬಂಟ್ವಾಳ, ಜು 18 : ಬಿ. ಸಿ ರೋಡ್ ನ ಹೃದಯ ಭಾಗದಲ್ಲಿರುವ ಅವೈಜ್ಞಾನಿಕವಾಗಿ ನಿರ್ಮಾಣಗೊಂಡು ಏಕಮುಖ ಸಂಚಾರಕ್ಕೆ ಮಾತ್ರ ಸೀಮಿತಗೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಮೇಲ್ಸೇತುವೆಯಿಂದ ವಾಹನ ಸವಾರರಿಗೆ ಮುಕ್ತಿ ದೊರಕಲಿದೆ. ಕಾರಣ ಭಾರತ್ ಮಾಲಾ ಯೋಜನೆ ಅನುಷ್ಠಾನ ಗೊಳ್ಳುವ ಸಂದರ್ಭ ಈ ಸೇತುವೆ ತೆರವುಗೊಳ್ಳವುದು ನಿಶ್ಚಿತವಾಗಿದೆ . ಈಗಾಗಲೇ ಭಾರತ್ ಮಾಲಾ ಯೋಜನೆಗೆ ಡಿಪಿಆರ್ ಆಗಿದ್ದು, ಕೇಂದ್ರ ಭೂ ಸಾರಿಗೆ ಸಚಿವರಿಗೆ ಈ ಬಗ್ಗೆ ವರದಿ ಕಳುಹಿಸಲಾಗಿದೆ.
ಮಂಗಳೂರು ಬಿ ಸಿ ರೋಡ್ ರಸ್ತೆ ಆರು ಪಥಗಳ ಎಕ್ಸ್ ಪ್ರೆಸ್ ಕಾರಿಡಾರ್ ಆಗಿ ಅಭಿವೃದ್ದಿಗೊಳ್ಳಲಿದ್ದು ಈ ಸಂದರ್ಭ ಅವೈಜ್ಞಾನಿಕ ಫ್ಲೈ ಓವರ್ ತೆರವಾಗಲಿದೆ ಎಂದು ಬಿ.ಸಿ ರೋಡು ಶಾಸಕರ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಗಳ ಸಭೆಯಲ್ಲಿ ಇಂಜಿನಿಯರ್ ಅಜಿತ್ ಮಾಹಿತಿ ನೀಡಿದರು. ಇದೇ ಸಂದರ್ಭ ಅವರು ಮೂಲ್ಕಿ - ಬಿ.ಸಿ ರೋಡ್ , ಮೆಲ್ಕಾರ್ -ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಡಿಪಿಆರ್ ಆಗಿದೆ ಎಂದು ತಿಳಿಸಿದರು.