ಬೆಳ್ತಂಗಡಿ, ಜು 18: ಎರಡು ದಿನಗಳ ಹಿಂದೆಯಷ್ಟೇ ಸಂಚಾರಕ್ಕೆ ಮುಕ್ತಗೊಂಡ ಶಿರಾಡಿಘಾಟ್ ರಸ್ತೆಯಲ್ಲಿ ಜು ೧೮ ರ ಬುಧವಾರ ಕಾರೊಂದು ಅಪಘಾತಕ್ಕೀಡಾಗಿದೆ. ಪುತ್ತೂರು ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ರಸ್ತೆ ಅಂಚಿನಲ್ಲಿದ್ದ ಚರಂಡಿಗೆ ಇಳಿದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇನ್ನು ಶಿರಾಡಿಯಲ್ಲಿ ನಿಷೇಧದ ನಡುವೆಯೇ ಘನವಾಹನಗಳು ಚಲಿಸುತ್ತಿರುವ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಅತಿಯಾದ ವೇಗದಿಂದ ಘನವಾಹನಗಳು ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದು, ಈ ವೇಳೆ ಅಪಘಾತಗಳು ಸಂಭವಿಸುತ್ತವೆ. ದ.ಕ. ಜಿಲ್ಲೆಯಿಂದ ತೆರಳುವಂತಹ ವಾಹನಗಳಿಗೆ ಬೆಂಗಳೂರಿನಿಂದ ಅತಿಯಾದ ವೇಗದಲ್ಲಿ ಬರುವ ಬಸ್ ಗಳು ಸಮಸ್ಯೆಯಾಗಿ ಪರಿಣಮಿಸಿವೆ. ಇನ್ನೊಂದೆಡೆ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಅಪಘಾತಗಳಿಗೆ ಆಹ್ವಾನವನ್ನು ಕೂಡ ನೀಡುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದ ಬಳಿಕವೂ ಘನ ವಾಹನಗಳು ಸಂಚರಿಸುತ್ತಿರುವುದು ಅವರ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.