ಕಾಸರಗೋಡು, ಜು 18: ಎರ್ನಾಕುಳಂ ಮಹಾರಾಜಾಸ್ ಕಾಲೇಜಿನ ಎಸ್ಎಫ್ಐ ವಿದ್ಯಾರ್ಥಿ ಮುಖಂಡ ಅಭಿಮನ್ಯು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದ ಅಭಿಮನ್ಯು ಮತ್ತು ಬಂಧಿತ ಆರೋಪಿ ಮೊಹಮ್ಮದ್
ಮಹಾರಾಜಾಸ್ ಕಾಲೇಜಿನ ಅರೆಬಿಕ್ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿ ಹಾಗೂ ಕ್ಯಾಂಪಸ್ ಫ್ರಂಟ್ನ ಮಹಾರಾಜಾಸ್ ಕಾಲೇಜು ಘಟಕ ಅಧ್ಯಕ್ಷನೂ ಆಗಿರುವ ಆಲಪ್ಪುಳ ಅರುಕುಟ್ಟಿ ವಡುತ್ತಲ ನಿವಾಸಿ ಮೊಹಮ್ಮದ್ (22) ಬಂಧಿತನಾದ ಆರೋಪಿಯಾಗಿದ್ದಾನೆ. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರು-ಮಂಜೇಶ್ವರ ಗಡಿ ಪ್ರದೇಶದಿಂದ ಇಂದು ಬೆಳಿಗ್ಗೆ ಸೆರೆ ಹಿಡಿಯಲಾಗಿದೆ. ಎರಡು ದಿನಗಳ ಹಿಂದೆ ಇನ್ನೋರ್ವ ಆರೋಪಿ ಆದಿಲ್ ನನ್ನ ಬಂಧಿಸಿದಾಗ ಲಭಿಸಿದ ಮಾಹಿತಿಯಂತೆ ಮುಹಮ್ಮದ್ ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಅಭಿಮನ್ಯು ಕೊಲೆ ಬಳಿಕ ಅಂದು ರಾತ್ರಿಯೇ ಮೊಹಮ್ಮದ್ ಸ್ಥಳ ಬಿಟ್ಟಿದ್ದ. ಬಳಿಕ ಅಲ್ಲಿಂದ ಗೋವಾಕ್ಕೆ ಹೋಗಿ ಅಲ್ಲಿ ಕೆಲವು ದಿನ ತಲೆಮರೆಸಿಕೊಂಡಿದ್ದನು. ಬಳಿಕ ಮಂಗಳೂರಿಗೆ ಬಂದು ಅಲ್ಲಿ ಕೆಲವು ದಿನ ಕಳೆದು ಇಂದು ಮುಂಜಾನೆ ಮಂಗಳೂರಿನಿಂದ ಕೇರಳಕ್ಕೆ ಬರುತ್ತಿದ್ದ ವೇಳೆ ಆ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ವಿಶೇಷ ತನಿಖಾ ತಂಡ ಮಂಗಳೂರು-ಮಂಜೇಶ್ವರ ನಡುವಿನ ಗಡಿ ಪ್ರದೇಶದಿಂದ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಆತನನ್ನು ಎರ್ನಾಕುಳಂಗೆ ಒಯ್ದು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ.
ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಒಂಭತ್ತು ಮಂದಿಯನ್ನು ಬಂಧಿಸಲಾಗಿತ್ತು. ಕಾಲೇಜಿನ ಗೋಡೆಯನ್ನು ಬಳಸುವ ಸಂಬಂಧ ಘರ್ಷಣೆ ನಡೆದು ಈ ಕೃತ್ಯ ನಡೆದಿತ್ತು .