ಹೆಜಮಾಡಿ,ಜು 18: ಕರ್ನಾಟಕ ಸರ್ಕಾರ ಪಶುಸಂಗೋಪನ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು.
ಬಂದರು ಸಂಪರ್ಕ ರಸ್ತೆ ಕೋಟಿ ಅನುದಾನದಲ್ಲಿ ಈಗಾಗಲೇ ಕಾಮಗಾರಿ ಮುಗಿದು ಜನಬಳಕೆಗೆ ಲಭ್ಯವಾಗಬೇಕಾಗಿತ್ತು. . ಎಪ್ರಿಲ್ ತಿಂಗಳಲ್ಲಿ ಟೆಂಡರಾದ ಕಾಮಗಾರಿ ಚುನಾವಣಾ ನೀತಿ ಸಂಹಿತೆಯ ಕಾರಣ ವಿಳಂಭವಾಯಿತು. ಆದರೂ ಚುನಾವಣೆ ಮುಗಿದು ತಿಂಗಳು ಎರಡಾದರೂ ಕಾಮಗಾರಿ ಪ್ರಾರಂಭಿಸದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸಚಿವರು ಬರುವ ಸೂಚನೆ ಸಿಕ್ಕದ ಕೂಡಲೇ ಗುತ್ತಿಗೆ ದಾರರು ರಾತೋರಾತ್ರಿ ರಸ್ತೆಗೆ ಜಲ್ಲಿ ಸುರಿದು ರಿಪೇರಿ ಪ್ರಾರಂಭಿಸಿದರು. ಜೆಸಿಬಿ ಕೈ ಕೊಟ್ಟಿದ್ದರಿಂದ ಕಾಮಗಾರಿ ಅರ್ಧದಲ್ಲಿಯೇ ನಿಂತು ಬಂದರು ಪ್ರದೇಶಕ್ಕೆ ಯಾವುದೇ ವಾಹನ ತೆರಳದಂತಾಯಿತು. ಸಚಿವರ ಆಗಮನವಾಗುತಿದ್ದಂತೆಯೇ ಸಚಿವರಿಗೆ ಬಂದರರು ದರ್ಶನ ಭಾಗ್ಯ ಲಭಿಸಲಿಲ್ಲ. ಅನಿವಾರ್ಯವಾಗಿ ಅಧಿಕಾರಿಗಳು ದಾರಿಯಲ್ಲಿಯೇ ಅವರನ್ನು ಸ್ವಾಗತಿಸಿದರು. ಬಳಿಕ ಮಾಧ್ಯಮದೊಡನೆ ಮಾತನಾಡಿದ ನಾಡಗೌಡ ಈ ಪ್ರದೇಶದ ಬಂದರು ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಒಪ್ಪಿಕೊಂಡಿವೆ. ಕರಾವಳಿಯನ್ನು ಯಾವುದೇ ರೀತಿಯಲ್ಲಿ ಸರಕಾರ ಕಡೆಗಣಿಸಿಲ್ಲ. ಹಿಂದಿನ ಸರಕಾರದ ಮಂಡಿಸಿದ ಬಜೆಟ್ ನ್ನು ಮುಂದುವರಿಸಿಕೊಂಡು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೆಲಸಮಾಡಲಿದೆ.
ಹೆಜಮಾಡಿಯಲ್ಲಿ ಸಮುದ್ರದಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸುವ ಯೋಜನೆಯ ಪ್ರಸ್ತಾಪನೆ ಇದ್ದು ಸಮುದ್ರದಲ್ಲಿ ಇದನ್ನು ಮಾಡುವುದರಿಂದ ಯಾರದೇ ಪರವಾನಿಗೆ ಅಗತ್ಯ ಬೀಳುವುದಿಲ್ಲ. ಆಕ್ಷೇಪಣೆಗಳೂ ಬರುವುದಿಲ್ಲ. ಗೋವಾದ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಲಾಗುತ್ತದೆ. ಇದರ ಬಗ್ಗೆ ತಜ್ನರ ತಂಡವೊಂದನ್ನು ಗೋವಾಕ್ಕೆ ಕಳುಹಿಸಿ ಅಧ್ಯಯನ ಮಾಡಿ ಆಮೇಲೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಲಿದ್ದೇವೆ ಎಂದರು. ಸಚಿವರ ಜೊತೆಯಲ್ಲಿ ಶಾಸಕ ಲಾಲಜಿ ಮೆಂಡನ್, ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಮುಂತಾದವರಿದ್ದರು.