ಉಡುಪಿ, ಜು 18: ಪಶ್ಚಿಮ ಬಂಗಾಳ ಮೂಲದ ನಾಲ್ವರು ಬಾಲ ಕಾರ್ಮಿಕರನ್ನು ಉಡುಪಿ ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಜು.18 ರ ಬುಧವಾರ ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಈ ನಾಲ್ವರು ಬಾಲಕರು ಉಡುಪಿಯ ಚಿತ್ತರಂಜನ್ ವೃತ್ತದ ಬಳಿ ಇರುವ ಕಟ್ಟಡವೊಂದರಲ್ಲಿ ಚಿನ್ನಾಭರಣ ತಯಾರಿಕಾ ಘಟಕವೊಂದರಲ್ಲಿ ದುಡಿಯುತ್ತಿದ್ದರು. ಚಿನ್ನವನ್ನು ಕರಗಿಸಲು ಕೆಲವು ರಾಸಾಯನಿಕ, ಹಾಗೂ ಗ್ಯಾಸ್ ಬಳಸುವ ಬಳಸುವುದರಿಂದ ಚಿನ್ನಾಭರಣ ಘಟಕವನ್ನು ಅಪಾಯಕಾರಿ ಉದ್ಯಮಿ ಎಂಬುದಾಗಿ ಪರಿಗಣಿಸಲಾಗಿದ್ದು, ಇದರಲ್ಲಿ 18 ವರ್ಷ ದೊಳಗಿನ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅಪರಾಧವಾಗಿದೆ.
ಬಾಲಕರಲ್ಲಿ ಓರ್ವ 17 ವರ್ಷ ಹಾಗೂ ಮೂವರು 13 ವರ್ಷದ ಮಕ್ಕಳಿದ್ದು ಇವರನ್ನು ರಕ್ಷಿಸಿ ಪುನರ್ವಸತಿಗಾಗಿ ಕಳುಹಿಸಲಾಗಿದೆ. ದಾಳಿಯ ಸಂದರ್ಭ 15 ಮಂದಿ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದು, ದಾಳಿಯ ಸಂದರ್ಭದಲ್ಲಿ ಈ ಘಟಕ ಸಂಬಂಧಪಟ್ಟ ಪರವಾನಿಗೆ ಹೊಂದಿಲ್ಲ ಎಂಬುದು ಬಹಿರಂಗವಾಗಿದೆ. ಶೀಘ್ರವೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಕಾರ್ಮಿಕ ಪರಿಶೀಲನಾಧಿಕಾರಿ ರಾಮಮೂರ್ತಿ ಎಸ್ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶಕ ಪ್ರಭಾಕರ್ ಆಚಾರ್ಯ, ಕಾರ್ಮಿಕ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್ ಮುಂತಾದವರು ಭಾಗಿಯಾಗಿದ್ದರು.