ಮಂಗಳೂರು, ಜು 18: ದಕ್ಷಿಣ ಕನ್ನಡ ಜಿಲ್ಲೆಗೆ ಜುಲೈ 25ರಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು ಇವರ ಭೇಟಿ ವೇಳೆ ಮೀನುಗಾರರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮೀತಿ ಮತ್ತು ಜಿಲ್ಲಾ ಬಿಜೆಪಿ ಮೀನುಗಾರರ ಪ್ರಕೋಷ್ಠದ ವತಿಯಿಂದ ಮಾಜಿ ಸಿಎಂ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕೋಷ್ಟದ ಮುಖಂಡರಾದ ರಾಮಚಂದ್ರ ಬೈಕಂಪಾಡಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಜೆಟ್ ನಲ್ಲಿ ಮೀನುಗಾರರಿಗೆ ಇಟ್ಟಂತಹ 285 ಕೋಟಿ ರೂಪಾಯಿಗಳನ್ನು 218 ಕೋಟಿ ರೂಪಾಯಿಗೆ ಇಳಿಸಿದೆ. ರಾಜ್ಯ ಸರಕಾರ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮೀನುಗಾರರ ಯಾವುದೇ ಬೇಡಿಕೆಗಳಿಗೆ ಸಮ್ಮಿಶ್ರ ಸರಕಾರ ಸ್ಪಂಧನೆ ನೀಡಿಲ್ಲ. ಯಾವುದೇ ಯೋಜನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರ ಒಂದು ಅಂಗದಂತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕರಾವಳಿಗೆ ಆಗಮಿಸುವ ಸಂದರ್ಭ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.