ಉಡುಪಿ, ಜು 18: ಮಹಿಳಾ ಮೀನುಗಾರರಿಗೆ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸೇರಿದಂತೆ ವಿವಿದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ ಉಡುಪಿಯ ಮೀನುಗಾರ ಮಹಿಳೆಯರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ ಲಭಿಸಿದೆ. ಮಹಿಳಾ ಮೀನುಗಾರರ ಬೇಡಿಕೆಗೆ ರಾಜ್ಯ ಸರಕಾರ ಆಸ್ತು ಎಂದಿದೆ.
ಸಿಎಂ ಕುಮಾರಸ್ವಾಮಿ ಬಜೆಟ್ನಲ್ಲಿ ಕರವಾಳಿ ಮೀನುಗಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ 3 ದಿನಗಳ ಹಿಂದೆ ಉಡುಪಿ ಮೀನು ಮಾರುಕಟ್ಟೆಯ ಮಹಿಳಾ ಮೀನುಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಆ ಮೂಲಕ ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ. ಈಗ ರಾಜ್ಯ ಸರಕಾರ ಮಹಿಳಾ ಮೀನುಗಾರರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದೆ. ಇಂದು ಮೀನುಗಾರಿಕ ಸಚಿವ ವೆಂಕಟೇಶ್ ನಾಡಗೌಡ ಮೀನು ಮಾರುಕಟ್ಟೆಗೆ ಭೇಟಿ ನೀಡಿದರು. ಇದೇ ಸಂದರ್ಭ ಮೀನುಗಾರರ ಮಹಿಳೆಯರು ಸಚಿವರಿಗೆ ತಮ್ಮ ಬೇಡಿಕೆಗಳೊಂದಿಗೆ ಮನವಿ ಸಲ್ಲಿಸಿದರು. ಮೀನುಗಾರ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ ಸಚಿವರು ಎಲ್ಲಾ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಇನ್ನು ಮಾರುಕಟ್ಟೆಯ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮಹಿಳಾ ಮೀನುಗಾರರ ಬೇಡಿಕೆಗಳಲ್ಲಿ ಕೆಲವೊಂದನ್ನು ಈಗಾಗಲೇ ಸರಕಾರ ಈಡೇರಿಸಲು ಆದೇಶ ಹೊರಡಿಸಿದೆ. ಮಹಿಳಾ ಮೀನುಗಾರರು 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಒಂದು ಸಾವಿರ ಪಿಂಚಣಿ ಯೋಜನೆ ನೀಡಬೇಕು ಎಂಬ ಆಗ್ರಹ ಮಾಡಿದ್ದು ಇಗಾಗಲೇ ಸರಕಾರ ಪಿಂಚಣೆ ಯೋಜನೆಯ ಬೇಡಿಕೆಯನ್ನು ಈಡೇರಿಸಿದೆ. ಮಹಿಳಾ ಮೀನುಗಾರರ ಸಾಲ ಮನ್ನಾ ಹಾಗೂ 50 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿರಿಸಿದ್ದಾರೆ. ಇವರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಇನ್ನು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮೀನುಗಾರಿಕ ಸಚಿವ ವೆಂಕಟೇಶ್ ನಾಡಗೌಡ ಮಲ್ಪೆ ಬಂದರಿಗೆ ಭೇಟಿ ನೀಡಿದರು. ಇದೇ ಸಂದರ್ಭ ಸಚಿವರು ಬ್ಯಾಟರಿ ಚಾಲಿತ ಮೀನುಗಾರಿಕ ಬೋಟ್ಗೆ ಬಂದರಿನಲ್ಲಿ ಪ್ರಾಯೋಗಿಕ ಚಾಲನೆ ನೀಡಿದರು. ಬೋಟ್ನಲ್ಲಿ ಸ್ವತಃ ಕುಳಿತು ಕೊಂಚ ದೂರ ಪ್ರಯಾಣಿಸಿ ಬೋಟ್ನ ಸಾಮಥ್ರ್ಯ ಪರಿಶೀಲನೆ ನಡೆಸಿದರು. ಬ್ಯಾಟರಿ ಚಾಲಿತ ಬೋಟ್ನ ಬಗ್ಗೆ ಮಲ್ಪೆ ಮೀನುಗಾರರು ವಿರೋಧ ವ್ಯಕ್ತ ಪಡಿಸಿದರು. ಸೀಮೆಎಣ್ಣೆ ಉಪಯೋಗಿಸಿ ಚಲಿಸುವ ಬೋಟುಗಳನ್ನು ಮೀನುಗಾರಿಕೆಗೆ ಬಳಸಲು ಅವಕಾಶ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಕೇಂದ್ರ ಸರಕಾರ ದೇಶದಲ್ಲಿ ಸೀಮೆಎಣ್ಣೆಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹೀಗಾಗಿ ಎಲ್ಲೂ ಸೀಮೆ ಎಣ್ಣೆ ಸಿಗುತ್ತಿಲ್ಲ. ನಾಡ ದೋಣಿ ಮೀನುಗಾರರಿಗೆ ಸೀಮೆ ಎಣ್ಣೆಯ ಬದಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬ್ಯಾಟರಿ ಚಾಲಿತ ಬೋಟ್ ನ ವ್ಯವಸ್ಥೆಯನ್ನು ಮಾಡುತ್ತಿದೆ. ಮೀನುಗಾರಿಕೆ ಆರಂಭವಾದ ಬಳಿಕ ಒಂದು ತಿಂಗಳು ಬ್ಯಾಟರಿ ಚಾಲಿತ ಬೋಟನ್ನು ಮತ್ತೆ ಪ್ರಾಯೋಗಿಕವಾಗಿ ಚಾಲನೆ ಮಾಡಿ ಪರಿಶೀಲನೆ ಮಾಡಲಾಗುವುದು. ಈ ಪ್ರಯತ್ನದಲ್ಲಿ ಯಶಸ್ವಿಯಾದಲ್ಲಿ ಈ ಯೋಜನೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.