ಉಡುಪಿ, ಜು 19: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ (೫೫) ಅವರು ಜು. 19 ರ ಗುರುವಾರ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಶ್ರೀಗಳನ್ನು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಶ್ರೀಗಳು ಕಳೆದ ಎರಡು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶ್ರೀಗಳ ಉತ್ತರಾಧಿಕಾರಿ ನೇಮಕ ವಿಚಾರವಾಗಿ ಇತರ ಸಪ್ತ ಮಠದ ಶ್ರೀಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಉತ್ತರಾಧಿಕಾರಿ ನೇಮಕ ಮಾಡದ ಹೊರತು ಶಿರೂರು ಶ್ರೀಗಳಿಗೆ ಪಟ್ಟದ ದೇವರನ್ನು ಹಸ್ತಾಂತರಿಸುವುದಿಲ್ಲ ಎಂದು ಅಷ್ಠಮಠಗಳ ಏಳು ಸ್ವಾಮೀಜಿಗಳು ಪಟ್ಟು ಹಿಡಿದಿದ್ದರು. ಶ್ರೀ ಕೃಷ್ಣ ಮಠದಲ್ಲಿ ಪೂಜೆಗಾಗಿ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ಮಠಾಧೀಶರು ನಿರಾಕರಿಸುತ್ತಿರುವ ದರೋಡೆಗೆ ಸಮ. ಶ್ರೀ ಕೃಷ್ಣ ನನ್ನ ಆಸ್ತಿಯಲ್ಲ, ರಾಮ ದೇವರು ಕೂಡಾ ನನ್ನ ಆಸ್ತಿಯಲ್ಲ ಆದರೆ ವಿಠಲ ಮಾತ್ರ ನನ್ನ ಸೊತ್ತು. ಪಟ್ಟದ ದೇವರಿಗಾಗಿ ಕ್ರಿಮಿನಲ್ ಕೇಸು ದಾಖಲಿಸಲು ಸಿದ್ದನೆಂದು ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಸೋಮವಾರ ಮಠದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಇನ್ನು ವಿಧಾನ ಸಭೆ ಚುನಾವಣೆ ಸಂದರ್ಭ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು ಬಳಿಕ ನಾಮಪತ್ರ ಹಿಂಪಡೆದಿದ್ದರು. ಈ ಸಂದರ್ಭ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಪಟ್ಟದ ದೇವರನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದ್ದರು. ಆಸ್ಪತ್ರೆಯಿಂದ ಗುಣಮುಖರಾಗಿ ಮಠಕ್ಕೆ ಬಂದ ಬಳಿಕ ಪಟ್ಟದ ದೇವರನ್ನು ಮರಳಿ ಪಡೆಯಲು ಹೋರಾಟ ನಡೆಸಿದ್ದರು.
1964 ರಲ್ಲಿ ಜನಿಸಿದ ಅವರು 1971 ರಲ್ಲಿ ತಮ್ಮ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಸ್ವಾಮೀಜಿಗಳ ಸಾವಿನ ಹಿನ್ನಲೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ಎಲ್ಲಾ ಶಾಲೆಗಳಿಗೆ ಮತ್ತು ಸಂಸ್ಥೆಗಳಿಗೆ ಗುರುವಾರ ರಜೆ ಘೋಷಿಸಿಸಲಾಗಿದೆ. ಶ್ರೀಗಳ ನಿಧನದಿಂದ ಅಪಾರ ಭಕ್ತಾದಿಗಳು ದುಃಖತಪ್ತರಾಗಿದ್ದಾರೆ.