ಉಡುಪಿ ಜು 19: ಉಡುಪಿಯ ಅಷ್ಠ ಮಠಾಧೀಶರಲ್ಲಿ ಒಂದಾದ ಶಿರೂರು ಮಠದ ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರು ವಿಧಿವಶರಾಗಿದ್ದು ಮಠ, ಅವರ ಭಕ್ತ ವೃಂದಕ್ಕೆ ತುಂಬಲಾರದ ನಷ್ಟವಾಗಿದೆ.ಕೇವಲ ಆಧ್ಯಾತ್ಮಿಕ, ಪಾರಮಾರ್ಥಿಕ ಬದುಕಿಗೆ ಸೀಮಿತರಾಗದೇ, ಲೌಕಿಕ ಜಗತ್ತಿನ ಹಲವು ವಿಷಯಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಬಹುಮುಖ ಪ್ರತಿಭೆಯ ಸ್ವಾಮೀಜಿಯಾಗಿದ್ದರು. 55ರ ಹರೆಯದ ಶಿರೂರುಶ್ರೀ ತಮ್ಮ ಎಂಟನೇ ವರ್ಷ ಪ್ರಾಯದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಮೂಲತಃ ಹೆಬ್ರಿ ಸಮೀಪದ ಮಡಾಮಕ್ಕಿಯ ವಿಠಲಾಚಾರ್ಯ ಹಾಗೂ ಕುಸುಮ ದಂಪತಿಯ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ ಎಂದಾಗಿತ್ತು.
ಉಡುಪಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ವಿಟ್ಲಪಿಂಡಿ ಉತ್ಸವಗಳಲ್ಲಿ ಶಿರೂರು ಶ್ರೀಗಳು ಮುಂಚೂಣಿ ವಹಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಉಡುಪಿಯ ರಥಬೀದಿಯ ಹಲವು ಸ್ಥಳಗಳಲ್ಲಿ ವೇಷಧಾರಿಗಳ ಪ್ರದರ್ಶನ ಮತ್ತು ಪುರಸ್ಕಾರಗಳು ನಡೆಯುತ್ತಿರುತ್ತದೆ. ಇದರಲ್ಲಿ ಯಾವಾಗಲೂ ಶಿರೂರು ಮಠದ ಕಡೆಯಿಂದ ನಡೆಯುತ್ತಿದ್ದ ವೇಷಗಳ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿರುತ್ತಿತ್ತು. ಹೆಚ್ಚಿನ ಸಂದರ್ಭದಲ್ಲಿ ಹಿರಿಯರು ಕಿರಿಯರು ವೇಷಧಾರಿಗಳೆಂಬ ಬೇಧವನ್ನು ತೋರದೆ ಎಲ್ಲರಿಗೂ ತಮ್ಮ ವೇದಿಕೆಯಲ್ಲಿ ವೇಷಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಸೂಕ್ತ ನಗದು ಪುರಸ್ಕಾರವನ್ನು ಬಹುಮಾನಗಳನ್ನು ತಮ್ಮ ಕೈಯಾರೆ ನೀಡುತ್ತಿದ್ದರು. ಸುಮಾರು ಹಲವಾರು ಗಂಟೆಗಳ ಕಾಲ ವೇದಿಕೆಯಲ್ಲೇ ಕುಳಿತು ವೇಷಧಾರಿಗಳ ಪ್ರದರ್ಶನವನ್ನು ಕಂಡು ಮಗುವಿನಂತೆ ಸಂತೋಷಪಟ್ಟು ಅವರಿಗೆ ಬಹುಮಾನ ನೀಡಿ ಕಳುಹಿಸುತ್ತಿದ್ದ ವಿಶಿಷ್ಠ ಗುಣ ಶ್ರೀಗಳದ್ದಾಗಿತ್ತು.
ಕಲಾರಾಧಕರಾಗಿದ್ದ ಇವರು ಡ್ರಮ್ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು. ಶಿವಮಣಿ ಹಾಗೂ ಇವರ ಜೋಡಿ ಈ ದಿಶೆಯಲ್ಲಿ ಬಹು ಜನಪ್ರಿಯತೆ ಪಡೆದಿತ್ತು. ಅಲ್ಲದೇ ಇವರು ಕರಾಟೆ ಪ್ರಿಯರಾಗಿದ್ದರು ಇನ್ನು ಶಿರೂರು ಸ್ವಾಮೀಜಿಗಳು ಒಬ್ಬ ಉತ್ತಮ ಈಜುಪಟುವಾಗಿದ್ದರೂ ಕೂಡಾ, ವಿಶಿಷ್ಠವಾಗಿದ್ದ ವ್ಯಕ್ತಿತ್ವವನ್ನು ಹೊಂದಿದ್ದ ಅವರು, ಗೋಪಾಲ ಖಾರ್ವಿ ಎಂಬವರು ಗಿನ್ನೆಸ್ ರೆಕಾರ್ಡ್ ಗಾಗಿ ಮಲ್ಪೆ ಸಮುದ್ರದಲ್ಲಿ ಈಜುವಾಗ ಅವರೊಂದಿಗೆ ಶ್ರೀಗಳು ಕೂಡಾ ಕೆಲವು ಕಿಲೋಮೀಟರುಗಳಷ್ಟು ದೂರ ಸಮುದ್ರದಲ್ಲಿ ಈಜಿ ತಾವೊಬ್ಬ ಉತ್ತಮ ಈಜುಪಟು ಎಂಬುದನ್ನು ಸಾಬೀತುಪಡಿಸಿದ್ದರು. ಇನ್ನೊಂದೆಡೆ ರಾಜಕೀಯದ ಬಗ್ಗೆಯೂ ಅವರಿಗೆ ಸೆಳೆತವಿತ್ತು.