ಬೆಳ್ತಂಗಡಿ, ಜು 19: ರಾಜ್ಯದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ಗಾಗಿ ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸದ ರಾಜ್ಯ ಸರಕಾರದಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟದ ಅಂಗವಾಗಿ ಬೆಳ್ತಂಗಡಿಯಲ್ಲೂ ಪರಿಷತ್ ಕಾರ್ಯಕರ್ತರು ಜು 19 ರ ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರಕಾರದ ಬಜೆಟ್ನಲ್ಲಿ ಎಸ್ಸಿ, ಎಸ್ಪಿ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಇಂದಿನ ರಾಜ್ಯ ಸರಕಾರ ಆ ಯೋಜನೆಯನ್ನು ಜಾರಿಗೊಳಿಸದೆ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸರಕಾರದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಅಲ್ಲದೆ ಸಾರಿಗೆ ಸಚಿವರು ಬಸ್ಪಾಸ್ ನೀಡಲಾಗುವುದಿಲ್ಲ ಎಂದು ಹೇಳಿದ ಹೇಳಿಕೆಯನ್ನು ಖಂಡಿಸಿ ಹೋರಾಟಕ್ಕೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ ಎಂದು ಪರಿಷತ್ ಜಿಲ್ಲಾ ಸಹ ಸಂಚಾಲಕ ಸಂದೇಶ್ ತಿಳಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟಿಸಿದರು. ಈ ಸಂದರ್ಭ ಪೋಲಿಸರು ಅಭಾವಿಪ ಜಿಲ್ಲಾ ಸಹಸಂಚಾಲಕ ಸಂದೇಶ್ ಹಾಗೂ ತಾಲೂಕು ಸಂಚಾಲಕ ತೀಕ್ಷಿತ್ ಅವರನ್ನು ಬಂಧಿಸಲೆತ್ನಿಸಿದಾಗ ವಿದ್ಯಾರ್ಥಿಗಳು ಪ್ರಬಲವಾಗಿ ವಿರೋಧಿಸಿದರು. ಬಳಿಕ ಪೋಲಿಸರ ಮನವಿ ಮೇರೆಗೆ ಪ್ರತಿಭಟನೆಯನ್ನು ಮಿನಿ ವಿಧಾನಸೌಧದ ಮುಂದೆ ಕುಳಿತು ಮುಂದುವರೆಸಿಲಾಯಿತು. ನಂತರ ರಾಜ್ಯ ಸರಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಿಂದಿನ ಕಾಂಗ್ರೇಸ್ ಸರಕಾರ ಬಜೆಟ್ನಲ್ಲಿ ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಬೇಕೆಂದು ಪರಿಷತ್ ಮನವಿಯಲ್ಲಿ ಆಗ್ರಹಿಸಿದೆ.
ಪ್ರತಿಭಟನೆಯ ನೇತೃತ್ವವನ್ನು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಪುತ್ತೂರುಜಿಲ್ಲಾ ಸಹ ಸಂಚಾಲಕ ಸಂದೇಶ್, ಬೆಳ್ತಂಗಡಿ ತಾಲೂಕು ಸಂಚಾಲಕ ತೀಕ್ಷಿತ್, ಬೆಳ್ತಂಗಡಿ ನಗರ ಕಾರ್ಯದರ್ಶಿ ಸುಮಂತ್, ಸಹ ಕಾರ್ಯದರ್ಶಿ ದೀಕ್ಷಿತಾ, ವಿದ್ಯಾರ್ಥಿನಿ ಪ್ರಮುಖ್ ಚಿತ್ರಾ ವಹಿಸಿದ್ದರು.