ಉಡುಪಿ, ಜು 19: ಶೀರೂರು ಮಠದ ಲಕ್ಷ್ಮೀವರ ಸ್ವಾಮಿಜಿ ವಿಧಿವಶ ಹಿನ್ನೆಲೆ ಶಿರೂರು ಮಠವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಜುಲೈ 20ರಿಂದ 3 ದಿನಗಳ ಕಾಲ ಶಿರೂರು ಮಠ ಪೊಲೀಸ್ ಸುಪರ್ದಿಯಲ್ಲಿರಲಿದೆ ಎಂದು ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಶಿರೂರು ಮೂಲ ಮಠಕ್ಕೆ ಸಾರ್ವಜನಿಕರಿಗೆ ನಾಳೆಯಿಂದ ಜುಲೈ 21ರವರೆಗೆ ಪ್ರವೇಶ ನಿರಾಕರಿಸಲಾಗಿದೆ. ಇದೀಗ ಮಠಕ್ಕೆ ಉಡುಪಿ ಎಸ್ಪಿ ಲಕ್ಷಣ ನಿಂಬರ್ಗಿ ಹಾಗೂ ಐಜಿ ಭೇಟಿ ನೀಡಿದ್ದಾರೆ. ಹಾಗೂ ಮಠದ ಸುತ್ತಮುತ್ತ 100ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದ್ದು ಮೂಲ ಮಠ ಪೊಲೀಸ್ ಸುಪರ್ದಿಯಲ್ಲಿದೆ. ಶೀರೂರು ಶ್ರೀಗಳ ಖಾಸಗಿ ಕೋಣೆಯಲ್ಲಿರುವ ರಹಸ್ಯ ಪತ್ತೆಗೆ ಕೋಣೆಯ ಬೀಗದ ಚಾವಿಗಾಗಿ ಮಠದ ಸಿಬ್ಬಂದಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇನ್ನು ಇಂದು ಬೆಳಿಗ್ಗೆ ವಿಧಿವಶರಾದ ಶಿರೂರು ಶ್ರೀಗಳ ಸಾವಿನ ಸುತ್ತ ಹಲವು ಅನುಮಾನಗಳು ಕಾಡಲಾರಂಭಿಸಿದೆ. ಈ ನಡುವೆ ಸ್ವಾಮೀಜಿಗಳಿಗೆ ವಿಷಪಾಶನ ಮಾಡಲಾಗಿದೆ ಎಂದು ಆರೋಪಿಸಿ ಅವರ ಪೂರ್ವಾಶ್ರಮದ ಸಹೋದರ ಹಿರಿಯಡ್ಕ ಠಾಣೆಗೆ ದೂರನ್ನು ನೀಡಿದ್ದು, ಇದೀಗ ಶಿರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ.