ಬಂಟ್ವಾಳ, ಜು 19: ಜುಲೈ 17ರಂದು ಹರಿಯುತ್ತಿರುವ ತೋಡಿನ ನೀರಿಗೆ ಜಾರಿಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಂಟ್ವಾಳದ ನಡುಮೊಗೆರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಮಂಗಳವಾರ ಸಂಜೆ ಉಳಿ ಗ್ರಾಮದ ಬನತ್ತಪಲ್ಕೆ ನಿವಾಸಿ ಅಹ್ಮದ್ ಬ್ಯಾರಿ (೮೭) ಹುಲ್ಲು ತರಲು ತೆರಳಿದ ಸಂದರ್ಭ ಕಾಲು ಜಾರಿ ನೀರಿನ ತೋಡಿಗೆ ಬಿದ್ದಿದ್ದರು. ಆ ಸಂದರ್ಭ ವಿಪರೀತ ಮಳೆ ಬಂದು ತೋಡಿನಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಈ ತೋಡಿನ ಬದಿಯಲ್ಲಿ ಹುಲ್ಲು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು. ಹುಲ್ಲು ತರಲು ತೆರಳಿದ್ದ ಅಹ್ಮದ್ ಬ್ಯಾರಿಗಾಗಿ ಸ್ಥಳೀಯರು ಹುಡುಕಾಟ ಆರಂಭಿಸಲಾಯಿತು. ನಿರಂತರ ಹುಡುಕಾಟದ ಬಳಿಕ ಇಂದು ನೇತ್ರಾವತಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನೆಯ ಕುರಿತಂತೆ ಪುಂಜಾಲಕಟ್ಟೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.