ಮಂಗಳೂರು, ಜು 19: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ರವಿ ಯಾನೆ ಟಿಕ್ಕಿ ರವಿ(34) ಹಾಗೂ ಗುರುನಗರದ ಸಂದೀಪ್(32) ಬಂಧಿತ ಆರೋಪಿಗಳು. ಇವರನ್ನು ಗುರುಪುರ ಅಲಾಯಿಗುಡ್ಡೆ ಎಂಬಲ್ಲಿಂದ ವಶಕ್ಕೆ ಪಡೆಯಲಾಗಿದೆ.
ಬಜಪೆ ಠಾಣಾ ಪೊಲೀಸರು ರೌಂಡ್ಸ್ ನಲ್ಲಿದ್ದ ಸಂದರ್ಭ ಅಲಾಯಿಗುಡ್ಡೆ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಗಾಂಜಾ ಹೊಂದಿರುವುದು ಪತ್ತೆಯಾಗಿದೆ. ತಕ್ಷಣ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ 5 ಸಾವಿರ ರೂಪಾಯಿ ಮೌಲ್ಯದ ಗಾಂಜಾ, ಮಾರುತಿ ಆಲ್ಟೋ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಗಳು ನಾಟೆಕಲ್ ನ ಮಹಮ್ಮದ್ ರಫೀಕ್ ಎಂಬಾತನಿಗೆ ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಮಂಗಳೂರಿನ ವಿವಿಧ ಠಾಣೆಗಳಲ್ಲಿ 5ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.