ಮಂಗಳೂರು, ಜು 20: ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ದಿವಂಗತ ಬಿ.ಎ. ಮೊಹಿದಿನ್ ಅವರ ಆತ್ಮಚರಿತ್ರೆ ‘ನನ್ನೊಳಗಿನ ನಾನು’ ಕೃತಿ ಬಿಡುಗಡೆ ಸಮಾರಂಭ ಮಂಗಳೂರಿನ ಪುರಭವನದಲ್ಲಿ ಜುಲೈ 20ರ ಶುಕ್ರವಾರ ನಡೆಯಿತು.
ಹಂಪಿ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, “ಮೊಹಿದಿನ್ ಓರ್ವ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರು ಹಾಗೂ ಚಿಂತಕರಾಗಿದ್ದರು. ಮೊಹಿದಿನ್ ಎಲ್ಲಾ ವರ್ಗದ, ಎಲ್ಲಾ ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು. ಇನ್ನು ಅವರ ಆತ್ಮಚರಿತ್ರೆಯ 200 ಪುಟಗಳ ಕೃತಿಯಲ್ಲಿ ಇತರ ನಾಯಕರೊಂದಿಗೆ ಕಳೆದಂತಹ ನೆನಪುಗಳು ಹಾಗೂ ತನ್ನ ರಾಜಕೀಯ ಜೀವನ ಏರಿಳಿತಗಳ ಬಗ್ಗೆ ವಿವರಿಸಲಾಗಿದೆ. ” ಎಂದು ಗುಣಗಾನ ಮಾಡಿದರು.
ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ಮೊಹಿದಿನ್ ಓರ್ವ ಮುಸ್ಲಿಂ ಸಮುದಾಯದ ನಾಯಕರಾಗಿದ್ದರೂ ಕೂಡ ಇತರ ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಎಲ್ಲಾ ವರ್ಗದ ಜನ ಮೊಹಿದಿನ್ ಅವರನ್ನು ಗೌರವದಿಂದಲೇ ಕಾಣುತ್ತಿದ್ದರು. ಅವರು ಎಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ. ಅವರು ತಮ್ಮ ಕೃತಿಯಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದು, ಕಳೆದ ಚುನಾವಣೆಯ ಕುರಿತಂತೆಯೂ ವಿವರಣೆ ಇದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಸಚಿವ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ, ಮನಪಾ ಮೇಯರ್ ಭಾಸ್ಕರ್ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.