ಉಡುಪಿ, ಜು21: ಅನುಮಾನಾಸ್ಪದವಾಗಿ ಮೃತಪಟ್ಟ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಜಿಗೆ ಮಹಿಳೆಯರ ಚಟದ ಜೊತೆಗೆ ಮದ್ಯಪಾನ ಸೇವನೆ ಕೂಡ ಮಾಡುತ್ತಿದ್ದರು ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬೇರೆ ಊರಲ್ಲಿ ಇದ್ದ ಕಾರಣ ಶಿರೂರು ಶ್ರೀಗಳ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಮತ್ತು ನಮ್ಮ ಪದ್ಧತಿಯಲ್ಲಿ ಸಾವಿಗೆ ಹೋಗವ ಕ್ರಮ ಇಲ್ಲ. ಶಿರೂರು ಶ್ರೀಗಳ ನಿಗೂಢ ಸಾವಿನ ವಿಚಾರದಲ್ಲಿ ಅಷ್ಟ ಮಠಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿಲ್ಲ. ಅವರಿಗೆ ಕುಡಿಯುವ ಮತ್ತು ಮಹಿಳೆಯರ ಚಟವಿತ್ತು. ಹೆಣ್ಣು ಮತ್ತು ಹೆಂಡದ ಸಹವಾಸದಿಂದ ಸನ್ಯಾಸತ್ವಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ದುಶ್ಚಟ ಬಿಡುವಂತೆ ಸ್ವತಃ ನಾನೇ ಶಿರೂರು ಶ್ರೀಗಳಿಗೆ ಹೇಳಿದ್ದೆ. ತಾರುಣ್ಯದಲ್ಲಿ ಅವರಿಗೆ ಸ್ತ್ರೀಯರ ಸಂಪರ್ಕವಿತ್ತು. ಅವರು ಮಠಾಧೀಶರಿಗೆಲ್ಲಾ ಮಕ್ಕಳಿದ್ದರು ಎಂದು ಹೇಳಿಕೆ ನೀಡಿದ್ದರು. ಅದು ಎಲ್ಲರಿಗೂ ಅಪಾರವಾದ ನೋವು ತಂದಿತ್ತು. ಮಾತ್ರವಲ್ಲ, ಶಿರೂರು ಶ್ರೀಗಳಿಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಹಾಗಾಗಿ ಈ ಸಾವು ಕೊಲೆಯಲ್ಲ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು. ಅವರ ಸಾವಿಗೆ ವಿಷ ಪ್ರಾಶನವೋ, ಆಹಾರ ದೋಷವೋ ಗೊತ್ತಿಲ್ಲ. ಆದರೆ ಪೊಲೀಸರು ವಿಚಾರಣೆಗೆ ಕರೆದರೆ ನಾನು ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಶಿರೂರು ಶ್ರೀಗಳಲ್ಲಿ ಅನೇಕ ಒಳ್ಳೆಯ ಗುಣಗಳು ಕೂಡ ಇದ್ದವು. ಅವರು ಉತ್ತಮ ಕಲಾವಿದರಾಗಿದ್ದರು. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಎಲ್ಲರೊಂದಿಗೆ ಬೆರೆತು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಇದೇ ವೇಳೆ ಪೇಜಾವರ ಶ್ರೀಗಳು ಹೇಳಿದ್ದಾರೆ.