ಉಡುಪಿ, ಜು21: ಕೃಷ್ಣ ನಗರಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅನುಮಾನಾಸ್ಪದ ಸಾವು ಹಿನ್ನಲೆಯಲ್ಲಿ, ತನಿಖೆ ಚುರುಕುಗೊಂಡಿದೆ. ಪೊಲೀಸರು ಮಠದ ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸಿದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ ಶಿರೂರು ಮೂಲ ಮಠಕ್ಕೆ ಭೇಟಿ ನೀಡಿದ್ದು, ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಉಡುಪಿ ಪೊಲೀಸ್ ವರಿಷ್ಠ ಲಕ್ಷ್ಮಣ್ ನಿಂಬರ್ಗಿ ಕೂಡ ಜೊತೆಗಿದ್ದು, ತನಿಖೆಯಲ್ಲಿ ಸಹಕರಿಸಲಿದ್ದಾರೆ.
ಇದೀಗ ಪೊಲೀಸರು, ಅಡುಗೆ ಮನೆಯ ಸಾಧನಗಳು ಮತ್ತು ಶ್ರೀಗಳು ಸೇವಿಸಿದ ಆಹಾರವನ್ನು ಕೆಲ ಅನುಮಾನಗಳ ಹಿನ್ನಲೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಶಿರೂರು ಗ್ರಾಮ ಮತ್ತು ಮಠದ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಾತ್ರವಲ್ಲ, ಜಿಲ್ಲಾ ಪೊಲೀಸರು ಶ್ರೀಗಳ ಸಾವಿನ ನಂತರ ಮಠಕ್ಕೆ ಯಾರೂ ಪ್ರವೇಶಿಸದಂತೆ ತಡೆ ನೀಡಿದ್ದಾರೆ. ಹಿರಿಯಡ್ಕ ಸಮೀಪ ಶಿರೂರು ಮೂಲಮಠದಲ್ಲಿ ಕೂಡ ಇದೇ ರೀತಿಯ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ಪೊಲೀಸ್ ತನಿಖೆ ಮುಗಿಯುವವರೆಗೆ ಮುಂದುವರಿಯಲಿದೆ. ಮಠದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸರು ನಿಗಾ ಇರಿಸಿದ್ದಾರೆ.