ಉಡುಪಿ, ಜು21: ಕೃಷ್ಣ ನಗರಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬ್ರಹ್ಮಾವರ ಮೂಲದ ರಮ್ಯಾ ಶೆಟ್ಟಿ ಎಂಬ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬ್ರಹ್ಮಾವರ ಮೂಲದ ಈ ಮಹಿಳೆ ನಿತ್ಯ ಆಶ್ರಮಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ಫಲಾಹಾರ ತಯಾರಿಸಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಆಶ್ರಮದ ಮೂಲಗಳು ತಿಳಿಸಿರುವಂತೆ ಈ ಮಹಿಳೆ ಪ್ರತೀ ಸೋಮವಾರ ಆಶ್ರಮಕ್ಕೆ ಆಗಮಿಸುತ್ತಿದ್ದರು. ಮಾತ್ರವಲ್ಲ ಮಠಕ್ಕೆ ಸೇರಿದ ಆರ್ಥಿಕ ವ್ಯವಹಾರಗಳಲ್ಲೂ ರಮ್ಯಾ ಶೆಟ್ಟಿ ಸ್ವಾಮೀಜಿ ಜೊತೆ ಮಾತನಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅನುಮಾನಾಸ್ಪದ ಸಾವು ಹಿನ್ನಲೆಯಲ್ಲಿ, ತನಿಖೆ ಚುರುಕುಗೊಂಡಿದ್ದು, ಪೊಲೀಸರು ಮಠದ ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸಿದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ರಮ್ಯಾ ಶೆಟ್ಟಿ ಎಂಬ ಮಹಿಳೆಯ ಜೊತೆ ವಿಚಾರಣೆ ಕೂಡ ನಡೆಯುತ್ತಿದೆ.