ಉಡುಪಿ, ಜು 22 : ಶ್ರೀರೂರು ಶ್ರೀ ಸಾವಿನ ಬಳಿಕ ಶಿರೂರು ಮಠದ ಆಡಳಿತಕ್ಕೆ ಐವರು ಸದಸ್ಯರ ಸಮಿತಿ ರಚಿಸುವುದಾಗಿ ದ್ವಂದ್ವ ಮಠವಾದ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ತಿಳಿಸಿದ್ದಾರೆ.
ಮಠದ ಆಡಳಿತ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಇದರಲ್ಲಿ ಶಿರೂರು ಮಠದ ಅನುಭವಸ್ಥರನ್ನು ಸೇರಿಸಿಕೊಳ್ಳಲಾಗುವುದು ಎಂದರು. ಆಷಾಢ ಮಾಸವಾಗಿದ್ದರಿಂದ ಶಿಷ್ಯ ಸ್ವೀಕಾರಕ್ಕೆ ಯೋಗ್ಯ ಸಮಯವಲ್ಲ. ಹಾಗಾಗಿ ಈ ಮಾಸ ಮುಗಿದ ಮೇಲಷ್ಟೇ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕಾಗಿದೆ. ವಟುಗಳ ಜಾತಕ ಪರಿಶೀಲನೆ ನಡೆಯುತ್ತಿದ್ದು ಚಾತುರ್ಮಾಸ್ಯ ಮುಗಿದ ತಕ್ಷಣ ಪ್ರಕ್ರಿಯೆ ನಡೆಯಲಿದೆ ಎಂದರು.
ನೂತನ ಸಮಿತಿ ಸೋಮವಾರ ರಚನೆಯಾಗಲಿದೆ. ಇನ್ನೊಂದೆಡೆ ಶಿರೂರುಶ್ರೀಗಳ ನಿಧನದ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ಬರಲು ಹಲವರು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.