ಕುಂದಾಪುರ, ಜು 23: ಕ್ರೀಡೆ ಮನುಷ್ಯನ ಚುರುಕುತನವನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.ಹಾಗಾಗಿ ಪ್ರತಿಯೊಬ್ಬರೂ ತನ್ನ ದೈನಂದಿನ ಬದುಕಿನಲ್ಲಿ ಬಿಡುವು ಮಾಡಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಬೆಳೆಸಬೇಕು - ಇದು ಪ್ರತಿಯೊಬ್ಬರೂ ಪ್ರತೀ ಬಾರಿಯೂ ಆಡುವ ಮಾತುಗಳು. ಆದರೆ ನಮ್ಮ ಇಂದಿನ ಒತ್ತಡದ ಬದುಕಿನಲ್ಲಿ ಒತ್ತಡ ಮುಕ್ತ ಬದುಕು ಕಲ್ಪಿಸಿಕೊಳ್ಳುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ಎನ್ನುವುದೂ ಕೂಡಾ ಅಷ್ಟೇ ಸತ್ಯ. ಆದರಲ್ಲಿಯೂ ದಿನದ ೨೪ ಗಂಟೆಗಳೂ ಅಲರ್ಟ್ ಆಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪೊಲೀಸರಿಗೆ ಅಂತಹಾ ಬಿಡುವು ಸಿಗುವುದು ಕೂಡಾ ದುರ್ಲಭ ಎನ್ನುವುದೂ ರ್ಸಾಜನಿಕ ಸತ್ಯ. ಆದರೆ ಇದೆಲ್ಲದರ ನಡುವೆಯೂ ಕುಂದಾಪುರದ ಪೊಲೀಸರು ಬಿಡುವು ಮಾಡಿಕೊಂಡು ಕುಟುಂಬ ಸಮೇತ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ!
ಹೌದು ಪೊಲೀಸರೂ ಮನುಷ್ಯರೇ. ಅವರಿಗೂ ಮಾನಸಿಕ ಒತ್ತಡದಿಂದ ವಿಮುಕ್ತವಾಗುವ ಅವಕಾಶ ಇದೆ ಎನ್ನುವುದನ್ನು ಭಾನುವಾರ ಕಂಡ್ಲೂರಿನ ಪೊಲೀಸ್ ಠಾಣಾ ಸಮೀಪದ ಮೈದಾನದಲ್ಲಿ ನಡೆದ ಗ್ರಾಮಾಂತರ ಠಾಣಾ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ ಸಾಬೀತುಪಡಿಸಿದ್ದಾರೆ. ಈ ಸಂದರ್ಭ ಕ್ರೀಡಾಕೂಟದ ಉದ್ಘಾಟನೆಯನ್ನು ಶಾರದಾ ಕಾಲೇಜಿನ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ ನೆರವೇರಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸ್ನೇಹ ಬಾಂಧವ್ಯ ಬೆಳೆಯುತ್ತದೆ. ಆರೋಗ್ಯ ವೃದ್ಧಿಯಿಂದ ಕರ್ತವ್ಯ ನಿರ್ವಹಣೆ ಸಾಧ್ಯ. ಕ್ರೀಡೆಯಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ. ಕಂಡ್ಲೂರು ಠಾಣೆಯ ಸಿಬ್ಬಂದಿಗಳು ದಕ್ಷ ಕೆಲಸ ನಿರ್ವಹಿಸುತ್ತಿದ್ದಾರೆ ಅದು ಶ್ಲಾಘನೀಯ ಎಂದು ಹೇಳಿದರು. ಮಕ್ಕಳ ಏಳಿಗೆಗೆ ಹಾಗು ಸಂಸ್ಕಾರವಂತರಾಗಲೂ ತಾಯಂದಿರ ಪಾತ್ರ ಮಹತ್ವದ್ದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಕುಂದಾಪುರ ಡಿ,ವೈ.ಎಸ್.ಪಿ. ದಿನೇಶ್ ಕುಮಾರ್ ಸಿಬ್ಬಂದಿಗಳಿಗೆ ಶುಭ ಹಾರೈಸಿ, ಕ್ರೀಡಾ ಕೂಟದಲ್ಲಿ ಭಾಗವಹಿಸಿದರು. ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಶ್ರೀಧರ್ ನಾಯ್ಕ, ಸಹಾಯ ಉಪನೀರಿಕ್ಷಕರು ಫಣಿರಾಜ್, ನೇತಾಜಿ ಶಾಲೆಯ ಶಾರೀರಿಕ ಶಿಕ್ಷಕರಾದ ಜಯಕರ ಶೆಟ್ಟಿ ಉಪಸ್ಥಿತರಿದ್ದರು. ಮಧುಸೂದನ್ ಕಾರ್ಯಕ್ರಮನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು. ಆರಕ್ಷಕರು ಒಂದು ದಿನ ಬಿಡುವು ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಂಡರು.