ಜು, 23 : ಉಡುಪಿಯ ಶಿಕ್ಷಕ ರಾಜಾರಾಮ್ ಅವರ ಸೇವೆಯನ್ನು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿನಂದಿಸಿದ್ದಾರೆ. ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಬಾರಾಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಾಜಾರಾಂ ವಿಜ್ಞಾನ ಹಾಗೂ ಗಣಿತ ವಿಷಯವನ್ನು ಬೋಧಿಸುತ್ತಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಶಾಲಾ ವಾಹನದ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದಾರೆ.ರಾಜಾರಾಂ ಅವರ ಈ ಕಾರ್ಯವನ್ನು ಮೆಚ್ಚಿಕೊಂಡಿರುವ ವಿವಿಎಸ್ ಲಕ್ಷ್ಮಣ್ ಈ ವಿಷಯವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕಲಿಯುಗದ ದ್ರೋಣಾಚಾರ್ಯರಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಯಾವ ಸ್ವಾರ್ಥವೂ ಇಲ್ಲದೆ ದುಡಿಯುತ್ತಿವ ರಾಜಾರಾಮ್ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಉಡುಪಿ ಬ್ರಹ್ಮಾವರ ತಾಲೂಕಿನ ಬಾರಾಳಿ ಎಂಬ ಹಳ್ಳಿಯ ಶಾಲೆಯಲ್ಲಿ ದುಡಿಯುತ್ತಿರುವ ಇವರು ಶಿಕ್ಷಕ ಎನ್ನುವ ಹಮ್ಮು ಬಿಮ್ಮು ಗಳೆನ್ನದೆ ಶಾಲಾ ಬಸ್ನ ಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜಾರಾಮ್ ಅವರು ಮೂಲತಃ ಹೆಬ್ರಿಯವರು. ಅವರು ಇಷ್ಟಪಟ್ಟು ಸೇರಿದ ವೃತ್ತಿಯನ್ನು, ವೃತ್ತಿಧರ್ಮವನ್ನು ಎಂದೂ ನಿರ್ಲಕ್ಷ್ಯ ಮಾಡಿದವರಲ್ಲ. ದೈಹಿಕ ಶಿಕ್ಷಣ ಜೊತೆ ಜೊತೆಗೆ ಗಣಿತ, ವಿಜ್ಞಾನ ಪಾಠವನ್ನು ಮಾಡುತ್ತಾರೆ. ದಿನ ಮುಂಜಾನೆ 6 ಗಂಟೆಗೆ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಲು ಆರಂಭಿಸುವ ಇವರು ನಂತರ 8 ಗಂಟೆಗೆ ಬಸ್ನ ಚಾಲಕನ ಸೀಟ್ನಲ್ಲಿ ಕುಳಿತು ಮಕ್ಕಳನ್ನು ಕರೆತರಲು ತೆರಳುತ್ತಾರೆ. ಶಿರಿಯಾರ, ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು, ಕಾರ್ತಿಬೆಟ್ಟು, ಕಾಜ್ರಳ್ಳಿ ಮುಂತಾದ ಭಾಗಗಳಿಂದ ಬಸ್ನಲ್ಲಿ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಶಾಲೆಯ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಅವರು ಕರೆತರುತ್ತಾರೆ.