ಮೂಡುಬಿದಿರೆ, ಜು 24: ನನಗೆ ವಯಸ್ಸಾಗಿದೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಯುವ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡುತ್ತೇನೆ. ಬೇರೆ ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಇಲ್ಲಿ ಬಂದು ಸ್ಪರ್ಧಿಸುವುದಕ್ಕಿಂತ ಇಲ್ಲಿಯ ಯುವನಾಯಕರೇ ಸ್ಪರ್ಧಿಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತೇನೆ. ನಾನು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಯೇ ನನ್ನ ಗುರಿ. ಅದಕ್ಕಾಗಿ ಶ್ರಮಿಸುವೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸೋಮವಾರ ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೋದಿ ಒಬ್ಬ ಉತ್ತಮ ಕಲಾವಿದ. ಅವರಿಗೆ ಜನರನ್ನು ಮರುಳು ಮಾಡುವುದು ಚೆನ್ನಾಗಿ ಗೊತ್ತು. ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪೆಟ್ರೋಲ್,ಡಿಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಪ್ರಧಾನಿ ಮಾತ್ರ ವಿದೇಶ ಪ್ರವಾಸದಲ್ಲೇ ನಿರತರಾಗಿದ್ದಾರೆ. ವಿದೇಶ ಪ್ರವಾಸಗಳನ್ನು ಹಮ್ಮಿಕೊಳ್ಳುವುದು ವಿದೇಶಾಂಕ ಸಚಿವ ಕೆಲಸ. ಆದರೆ ಆ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಮೋದಿಯ ಭರವಸೆ ಇನ್ನೂ ಈಡೇರಲಿಲ್ಲ ಎಂದರು.
ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಗುರುಪುರ ಸೇತುವೆ ನಿರ್ಮಾಣದಂತಹ ಕೆಲಸಗಳನ್ನು ಮಾಡದೇ ಕೇವಲ ಕೋಟಿಗಟ್ಟಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ತಾವೊಬ್ಬ ನಿಷ್ಕ್ರೀಯ ಎಂದು ಸಾಬಿತುಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಂಸದನಾದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ಗುರುಪುರ ಸೇತುವೆಯ ಕೆಲಸವನ್ನು ಒಂದೇ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ರತ್ನಾಕರ ದೇವಾಡಿಗ, ಕರೀಂ, ಮುಖಂಡರಾದ ಅರುಣ್ ಶೆಟ್ಟಿ, ದಿಲೀಪ್ ಸುದ್ದಿಗೋಷ್ಠಿಯಲ್ಲಿದ್ದರು.