ಕಾಸರಗೋಡು, ಜು 23: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯವಾಗಿ ಮಾರ್ಪಡುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚಾಗಿವೆ. ನಗರ ಹೊರವಲಯದ ಅಡ್ಕತ್ತಬೈಲ್ನಲ್ಲಿ ಜುಲೈ 22ರ ಭಾನುವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಸಹೋದರರಿಬ್ಬರು ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಚೌಕಿ ಅರ್ಜಾಲಿನ ಎ. ಕೆ ರಜೀಶ್ ರವರ ಮಕ್ಕಳಾದ ಮುಹಮ್ಮದ್ ಮಿನ್ ಹಾಜ್ (4), ಸಹೋದರ ಇಬ್ರಾಹಿಂ ಶಾಸೀರ್ (7) ಎಂದು ಗುರುತಿಸಲಾಗಿದೆ. ಮಿನ್ ಹಾಜ್ ರಾತ್ರಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಶಾಸೀರ್ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಜಿಸ್ ಇಬ್ಬರು ಮಕ್ಕಳ ಜೊತೆ ಕಾಸರಗೋಡಿನಿಂದ ಮನೆಗೆ ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ರಜೀಶ್ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಟೂರಿಸ್ಟ್ ಬಸ್, ಎರಡು ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದಿದೆ. ಹೊಂಡಗಳನ್ನು ತಪ್ಪಿಸುವ ಭರದಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ.
ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗಳೇ ಕಾರಣ
ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೊಂಡಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು, ಕಾಸರಗೋಡಿನಿಂದ ತಲಪಾಡಿ ತನಕ ರಸ್ತೆ ಹೊಂಡಮಯವಾಗಿದೆ. ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತ ನಡೆಯಿತ್ತಿದೆ. ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಇದರಿಂದ ರಸ್ತೆಯಲ್ಲಿರುವ ಹೊಂಡಗಳು ಗೋಚರವಾಗುತ್ತಿಲ್ಲ. ಪರಿಣಾಮ ಅಪಘಾತಗಳು ಹೆಚ್ಚುತ್ತಿವೆ. ಕುಂಬಳೆಯಿಂದ ಕಾಸರಗೋಡು ತನಕ ಕಳೆದ ಎರಡು ವಾರಗಳ ಅವಧಿಯಲ್ಲಿ ೨೫ ಕ್ಕೂ ಅಧಿಕ ಅಪಘಾತಗಳು ನಡೆದಿದೆ. ಎರಡು ವಾರದ ಹಿಂದೆ ಮೊಗ್ರಾಲ್ ಪುತ್ತೂರು ಬಳಿ ಹೊಂಡ ತಪ್ಪಿಸುವ ಭರದಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ನಡೆದಿತ್ತು.