ಉಳ್ಳಾಲ, ಜು 24: ಬೆಂಗಳೂರು ಬಸವೇಶ್ವರನಗರದ ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈ. ಲಿ ಇವರು ರಚಿಸಿದ ರೋಬೊ ಕೋಸ್ಟಲ್ ಅಬ್ಸರ್ವರ್ ( ರೋಬೊ ಕರಾವಳಿ ವೀಕ್ಷಕ ) ಮತ್ತು ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) ಇದರ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಗೃಹರಕ್ಷಕ ದಳ , ಪ್ರವಾಸೋದ್ಯಮ , ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆಯ ಉಪಸ್ಥಿತಿಯಲ್ಲಿ ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ಸೋಮವಾರ ನಡೆಸಲಾಯಿತು.
ರೋಬೊ ಲೈಫ್ ಸೇವರ್ ( ರೋಬೊ ಜೀವರಕ್ಷಕ) : ಬ್ಯಾಟರಿ ಚಾಲಿತ ಉಪಕರಣವಾಗಿದ್ದು, ಲೈಫ್ ಗಾರ್ಡ್ ಉಪಯೋಗಿಸಿ ರಚಿಸಲಾಗಿದೆ. ಸೆನ್ಸಾರ್ , ಕೆಮರಾಗಳಿರುವ ಲೈಫ್ ಗಾರ್ಡನ್ನು ರಿಮೋಟಿನ ಮೂಲಕ ನಿಯಂತ್ರಿಸಲಾಗುತ್ತದೆ. ನೀರಿನಲ್ಲಿ ನಾಲ್ಕು ಕಿ.ಮೀ ಉದ್ದಕ್ಕೆ ಚಲಿಸಬಹುದಾದ ಉಪಕರಣವನ್ನು ಬ್ಯಾಟರಿಯಲ್ಲಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಿಸುತ್ತದೆ. ದಡದಿಂದಲೇ ರಿಮೋಟ್ ಮುಖೇನ ನಿಯಂತ್ರಿಸಿ ಅಪಾಯದಲ್ಲಿರುವವರನ್ನು ಉಪಕರಣದ ಮೂಲಕ ರಕ್ಷಿಸಬಹುದಾಗಿದೆ.
ಅಲೆಗಳ ಅಬ್ಬರಕ್ಕೆ ಕಾರ್ಯಾಚರಣೆ ಮೊಟಕು : ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ಅಲೆಗಳ ಎತ್ತರದಿಂದಾಗಿ ಪ್ರಾತ್ಯಕ್ಷಿಕೆ ನಡೆಸಲು ಅಸಾಧ್ಯವಾಗಿ ಕಾರ್ಯಾಚರಣೆ ಮೊಟಕುಗೊಂಡಿದೆ. ಸ್ಥಳೀಯ ಶಿವಾಜಿ ಜೀವರಕ್ಷಕ ಸಂಘದ ಸದಸ್ಯರ ಮುಖೇನ ಹಲವು ಬಾರಿ ಉಪಕರಣವನ್ನು ಸಮುದ್ರದ ನೀರಿಗೆ ಹಾಕಲಾಯಿತಾದರೂ, ಅಲೆಗಳನ್ನು ದಾಟಲು ಸಾಧ್ಯವಾಗದೆ ಉಪಕರಣ ವಾಪಸ್ಸು ದಡಕ್ಕೆ ಬಂದು ಸೇರಿತು. ಇದರಿಂದ ಪ್ರಾತ್ಯಕ್ಷಿಕೆ ನೋಡಲು ಬಂದ ನೂರಾರು ಜನರು, ಗೃಹ ರಕ್ಷಕ ದಳ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ನಿರಾಶೆಯಾಯಿತು.
ಸಿಟಿ ಕಂಟ್ರೋಲ್ ಟೆಕ್ನಾಲಜಿ (ಇಂಡಿಯಾ) ಪ್ರೈ. ಲಿ ಇದರ ನಿರ್ದೇಶಕ ಸುಮಂತ್ ಪ್ರತಿಕ್ರಿಯಿಸಿ ರೋಬೋವನ್ನು ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಬೇಕಿದೆ. ಸದ್ಯ ಮಳೆಗಾಲದ ಸಮಯವಾಗಿರುವುದರಿಂದ ಇಳಿಸಲು ಅಸಾಧ್ಯವಾಗಿದೆ. ಉಳ್ಳಾಲ ತೀರದಲ್ಲಿ ಬೋಟಿನ ವ್ಯವಸ್ಥೆಯೂ ಇಲ್ಲ. ಕೇವಲ ೨.೫ ಕೆಜಿ ತೂಕದ ವಸ್ತುವಾಗಿರುವುದರಿಂದ ಉಳ್ಳಾಲದ ಸಮುದ್ರದ ಅಲೆಗಳ ರಭಸದಲ್ಲಿ ಪ್ರಯೋಗಾರ್ಥ ವಿಫಲವಾಗಿದೆ. ಚೆನ್ನೈನಲ್ಲಿ ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ. ಹಡಗಿನಲ್ಲಿಯೂ ಸಾಧನವನ್ನು ಉಪಯೋಗಿಸಿ ಸಮುದ್ರಪಾಲಾಗುವವರನ್ನು ರಕ್ಷಿಸುವವರಿಗೂ ಸಹಕರಿಸುವಂತೆಯೂ ರಚಿಸಲಾಗಿದೆ ಎಂದ ಅವರು ಮಂಗಳವಾರದಂದು ಸುಲ್ತಾನ್ ಬತ್ತೇರಿಯಲ್ಲಿ ಮತ್ತೆ ಬೋಟಿನ ಮುಖೇನ ಸಮುದ್ರಕ್ಕೆ ಇಳಿಸಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯಕುಮಾರ್, ಕರಾವಳಿ ಕಾವಲು ಪಡೆ ನಿರೀಕ್ಷಕ ಗಂಗೀರೆಡ್ಡಿ,ಅಗ್ನಿ ಶಾಮಕ ದಳ ಮುಖ್ಯ ಅಧಿಕಾರಿ ಶಿವಶಂಕರ್ , ಗೃಹರಕ್ಷಕದ ದಳದ ಕಮಾಂಡೆಂಟ್ ಡಾ| ಮುರಳೀ ಮೋಹನ್ ಚೂಂತಾರು, ಉಪಕಮಾಂಡೆಂಟ್ ರಮೇಶ್ ಕುಮಾರ್ , ಕಂಪೆನಿಯ ಪ್ರಾಜೆಕ್ಟ್ ಮೆನೇಜರ್ ಪ್ರಸೂಲ್, ಇಂಜಿನಿಯರುಗಳಾದ ಜಾಸೀರ್, ಅಭಿಷೇಕ್ ಪ್ರಾತ್ಯಕ್ಷಿಕೆಯ ನೇತೃತ್ವ ವಹಿಸಿಕೊಂಡಿದ್ದರು.