ಬೈಂದೂರು, ಜು 24: ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಡುವೆ ಹೆದ್ದಾರಿಯಲ್ಲಿ ಎರಡು ವರ್ಷದ ಹಿಂದೆ ಆರಂಭವಾಗಿ, ಪರಿಸರದ ಎರಡು ಬಣಗಳ ಪರ-ವಿರೋಧ ಹೋರಾಟದ ಫಲವಾಗಿ ಸ್ಥಗಿತಗೊಂಡಿದ್ದ ಅಂಡರ್ ಪಾಸ್ ಕಾಮಗಾರಿ ಬಿಗು ಪೊಲೀಸ್ ರಕ್ಷಣೆಯ ನಡುವೆ ಸೋಮವಾರ ಪುನರಾರಂಭಗೊಂಡಿತು.
ಸ್ಥಳಕ್ಕೆ ಬಂದಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ಟಿ. ಭೂಬಾಲನ್ ಅವರ ಬಳಿ ಕಾಮಗಾರಿ ವಿರೋಧಿ ಬಣದ ಪ್ರಮುಖರಾದ ರಾಮಚಂದ್ರ, ನಾಣು ಡಿ. ಚಂದನ್, ಇತರರು ಇಲ್ಲಿ ಅಂಡರ್ ಪಾಸ್ ಮಾಡುವುದರಿಂದ ಹೆದ್ದಾರಿಯ ಪಶ್ಚಿಮದಲ್ಲಿರುವ ದಲಿತ ಕುಟುಂಬಗಳಿಗೆ, ಅವರ ದೇವಾಲಯಕ್ಕೆ ತೊಂದರೆಯಾಗುತ್ತದೆ. ಇಲ್ಲಿ ವಾಣಿಜ್ಯ ವ್ಯವಹಾರವಾಗಲಿ, ದಟ್ಟ ಜನವಸತಿಯಾಗಲಿ ಇಲ್ಲವಾದ್ದರಿಂದ ಇದು ಅದಕ್ಕೆ ಸೂಕ್ತ ಸ್ಥಳವಲ್ಲ. ಅಂಡರ್ ಪಾಸ್ ಕಾರಣಕ್ಕೆ ಇಲ್ಲಿ ಇಕ್ಕಡೆ ನಿರ್ಮಿಸುವ ಸರ್ವಿಸ್ ರಸ್ತೆಗೆ ಚರಂಡಿ ಇರುವುದಿಲ್ಲವಾದ್ದರಿಂದ ರಸ್ತೆ ಬದಿಯ ಮನೆಗಳ ಆವರಣಕ್ಕೆ ಮಳೆಗಾಲದಲ್ಲಿ ನೀರು ನುಗ್ಗುತ್ತದೆ ಎಂದು ಹೇಳಿ ಅದಕ್ಕೆ ನಾವುಂದದಲ್ಲಾಗಿರುವ ಅವ್ಯವಸ್ಥೆಯನ್ನು ಉದಾಹರಿಸಿದರು. ಆದುದರಿಂದ ಬದಲಿ ಜಾಗದಲ್ಲಿ ನಿರ್ಮಿಸಬೇಕು ಎಂದು ವಾದಿಸಿದರು. ಉಪ ವಿಭಾಗಾಧಿಕಾರಿ ಹೆದ್ದಾರಿ ಪ್ರಾಧಿಕಾರ ಇಲ್ಲಿಯೇ ನಿರ್ಮಿಸಬೇಕೆಂಬ ಅಂತಿಮ ತೀರ್ಮಾನ ತೆಗೆದುಕೊಂಡಿರುವುದರಿಂದ ಯಾವುದೇ ಬದಲಾವಣೆ ಈ ಹಂತದಲ್ಲಿ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಹಿಂದೆ ಇಲ್ಲಿ ಕಾಮಗಾರಿ ನಡೆಸಲು ಮುಂದಾದಾಗಲೆಲ್ಲ ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಿದ್ದರು. ಒಂದು ಬಣದ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ ವಹಿಸಿತ್ತು. ಅವರು ಜಿಲ್ಲಾಧಿಕಾರಿಗಳ ಬಳಿಗೆ ತೆರಳಿ ಮನವಿ ಸಲ್ಲಿಸಿದ್ದರು. ಸಂಸದ ಬಿ. ಎಸ್. ಯಡಿಯೂರಪ್ಪ ಅವರಿಂದ ತಮ್ಮ ಪರವಾದ ಪತ್ರವನ್ನೂ ತಂದು ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಗೆ ನೀಡಿದ್ದರು. ಇನ್ನೊಂದು ಬಣ ನೇರಾಗಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿತ್ತು. ಮಂತ್ರಾಲಯ ಮೂಲ ಯೋಜನೆಯನ್ವಯ ಕಾಮಗಾರಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿತ್ತು.
ಒಂದೆಡೆ ಇಲ್ಲಿ ಈಗಾಗಲೆ ಒಂದಷ್ಟು ಕಾಮಗಾರಿ ನಡೆದಿದೆ. ಇನ್ನೊಂದೆಡೆ ಸ್ಥಳ ಬದಲಾವಣೆಗೆ ಹೆದ್ದಾರಿ ಪ್ರಾಧಿಕಾರದಿಂದ ಒಪ್ಪಿಗೆ ಬರಲಿಲ್ಲ. ಇಲ್ಲಿನ ಅನಿಶ್ಚಿತತೆ ಒಟ್ಟು ಕಾಮಗಾರಿಯ ಪ್ರಗತಿಗೆ ತೊಡಕಾಗಿ ಪರಿಣಮಿಸಿದ್ದರಿಂದ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ನಿರ್ಧರಿಸಿ, ಉದ್ಭವಿಸಬಹುದಾದ ಪ್ರತಿರೋಧದ ಕಾರಣ ಪೊಲೀಸ್ ರಕ್ಷಣೆ ಬಯಸಿದ್ದರು. ಆ ಕಾರಣ ಕುಂದಾಪುರದ ಡಿವೈಎಸ್ಪಿ ದಿನೇಶ್ಕುಮಾರ್ ಸ್ಥಳಕ್ಕಾಗಮಿಸಿದ್ದರು. ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ, ಎಸ್ಐ ತಿಮ್ಮೇಶ್ ಬಿ. ಎನ್, ಕೊಲ್ಲೂರು ಎಸ್ಐ ಶಿವಕುಮಾರ ಎಂ.ಸಿ ಸ್ಥಳೀಯ ಪೊಲೀಸರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡ ರಕ್ಷಣೆಯಲ್ಲಿ ಕಾಮಗಾರಿ ಆರಂಭವಾಯಿತು. ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ.