ಮಂಗಳೂರು, ಫೆ. 28 (DaijiworldNews/SM): ಮಂಗಳೂರಿನಿಂದ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗುತ್ತೆ ಅನ್ನೋ ವಿಚಾರದ ಬಗ್ಗೆ ಬೆಚ್ಚಿ ಬೀಳಿಸುವಂತಹ ಕಥೆಯನ್ನು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಬಿಚ್ಚಿಟ್ಟಿದ್ದಾರೆ.

ಕೇರಳಕ್ಕೆ ಮಂಗಳೂರಿನಿಂದ ಅಕ್ರಮ ಮರಳು ಸಾಗಾಟಕ್ಕೆ ಪೂರ್ವ ಯೋಜನೆ ರೂಪಿಸಿಯೇ ದಂಧೆ ನಡೆಯುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಮತ್ತು ಕೆಲವೊಂದು ಒಳರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿರುವುದರಿಂದ ಅಕ್ರಮ ಮರಳು ಸಾಗಾಟಕ್ಕೆ ತೊಡಕಾಗಿದೆ. ಈ ಹಿನ್ನಲೆಯಲ್ಲಿ ಕೆಲವೊಂದು ಒಳರಸ್ತೆಯ ಮೂಲಕವೇ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ.
ಮೊದಲಿಗೆ ಸಣ್ಣ ಸಣ್ಣ ವಾಹನಗಳಲ್ಲಿ ಮರಳು ಲೋಡ್ ಮಾಡಿ ಚೆಕ್ ಪೋಸ್ಟ್ ಸಮೀಪದ ಮೈದಾನ ಅಥವಾ ಖಾಲಿ ಜಾಗದಲ್ಲಿ ಶೇಖರಣೆ ಮಾಡಲಾಗುತ್ತದೆ. ತಲಪಾಡಿ ಚೆಕ್ ಪೋಸ್ಟ್ ಸಮೀಪದ ಖಾಲಿ ಜಾಗದಲ್ಲಿ ಮರಳು ತಂದು ಶೇಖರಣೆಯನ್ನು ಮಾಡಲಾಗುತ್ತದೆ. ಅಲ್ಲಿ, ಕೇರಳ ಗಡಿ ಭಾಗದಲ್ಲಿ ಕೇರಳದ ಲಾರಿಗಳು ಮತ್ತು ಕರ್ನಾಟಕ ಗಡಿಭಾದಲ್ಲಿ ಕರ್ನಾಟಕದ ಲಾರಿಗಳು ಪೊಲೀಸ್ ಚೆಕ್ ಪೋಸ್ಟ್ ತೆರವುಗೊಳಿಸುವವರೆಗೂ ಕಾದು ಕುಳಿತಿರುತ್ತಾರೆ. ಪ್ರತಿನಿತ್ಯ ಸಂಜೆ ೪ ರಿಂದ ೭ ಗಂಟೆಯವರೆಗೆ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುತ್ತದೆ. ಇದೇ ಸಂದರ್ಭಕ್ಕಾಗಿ ಕಾದು ಕುಳಿತುಕೊಳ್ಳುವ ಲಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮರಳನ್ನು ಲೋಡ್ ಮಾಡಿಕೊಂಡು ಕೇರಳಕ್ಕೆ ಸಾಗಾಟ ಮಾಡಲಾಗುತ್ತದೆ.
ಕೇರಳದಲ್ಲಿಯೂ ನೇರವಾಗಿ ಮರಳು ಸಾಗಾಟ ನಡೆಯುವುದಿಲ್ಲ. ಬದಲಾಗಿ ಅಲ್ಲಿಯೂ, ಖಾಲಿ ಜಾಗಗಳಲ್ಲಿ ಡಂಪಿಂಗ್ ಮಾಡಿ ಬಳಿಕವೇ ಬೇಕಾದ ಕಡೆಗೆ ಮರಳನ್ನು ಸಾಗಾಟ ಮಾಡಲಾಗುತ್ತದೆ. ಮಾತ್ರವಲ್ಲದೆ, ಮಂಗಳೂರಿನಿಂದ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತದೋ ಅದಕ್ಕೇ ಟೋಲ್ ಸಿಬ್ಬಂದಿಗಳ ಸಹಕಾರವೂ ಇದೆ ಎನ್ನುವಂತಹ ಮಾಹಿತಿ ಇದೆ.
ಪೊಲೀಸರು ಬರುವಂತಹ ಮಾಹಿತಿ ಅಥವಾ ಪೊಲೀಸರು ತನಿಖೆ ನಡೆಸುತ್ತಿದ್ದರೆ ಈ ಎಲ್ಲಾ ಮಾಹಿತಿಯನ್ನು ಕೆಲವು ಟೋಲ್ ಸಿಬ್ಬಂದಿಗಳೇ ನೀಡುತ್ತಾರೆ. ಮಾತ್ರವಲ್ಲದೆ, ಟೋಲ್ ನಲ್ಲಿ ಕೇರಳಕ್ಕೆ ಸಂಚರಿಸಲು ೨-೩ ಲೇನ್ ಗಳು ಇದ್ದರೂ ಅಕ್ರಮ ಮರಳು ಸಾಗಾಟದ ಲಾರಿಗಳಿಗಳು ಯಾವ ಲೇನ್ ಮೂಲಕ ಸಂಚರಿಸಬೇಕೆಂಬುದನ್ನೂ ಟೋಲ್ ಸಿಬ್ಬಂದಿಗಳು ಸೂಚಿಸುತ್ತಾರೆ. ಅದೇ ಲೇನ್ ಮೂಲಕ ಮರಳು ಲಾರಿಗಳು ಸಂಚರಿಸುತ್ತವೆ ಎಂದು ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.