ಕಾಸರಗೋಡು, ಜು 24: ಮತ್ತಷ್ಟು ಬಲಿಗಾಗಿ ಬಾಯ್ತೆರೆದಿವೆ ಕಾಸರಗೋಡು - ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದು ಯಮಸ್ವರೂಪಿ ಹೊಂಡಗಳು ! ಹೌದು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಕಳೆದ ಕೇವಲ 15 ದಿನಗಳ ಅವಧಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾದವರು 9 ಮಂದಿ. ಹಾಗೂ ಗಂಭೀರ ಗಾಯಗೊಂಡ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವವರು 20 ಮಂದಿ.






ಜುಲೈ ಒಂಭತ್ತರಂದು ಉಪ್ಪಳ ನಯಾಬಜಾರ್ ನಲ್ಲಿ ಟ್ರಾವೆಲ್ಲರ್ ಜೀಪು ಮತ್ತು ಲಾರಿ ಡಿಕ್ಕಿ ಹೊಡೆದು ತಲಪಾಡಿ ಕೆ . ಸಿ ರೋಡ್ ನ ಆರು ಮಂದಿ ಮೃತಪಟ್ಟಿದ್ದರು .ಹೊಂಡ ತಪ್ಪಿಸುವ ಭರದಲ್ಲಿ ಈ ಅಪಘಾತ ನಡೆದಿತ್ತು .ಇನ್ನು ಜುಲೈ 14 ರಂದು ರಸ್ತೆಯಲ್ಲಿನ ಹೊಂಡಕ್ಕೆ ಬಿದ್ದು ಬೈಕ್ ಸ್ಕಿಡ್ ಆಗಿ ಹಾವೇರಿಯ ವೀರ ಬಸಪ್ಪ (45) ಮೃತಪಟ್ಟಿದ್ದರು. ಭಾನುವಾರ ರಾತ್ರಿ ಕಾಸರಗೋಡು ಅಡ್ಕತ್ತಬೈಲ್ ನಲ್ಲಿ ಸರಣಿ ಅಪಘಾತ ನಡೆದು ಬಾಲಕ ಸಹೋದರರಿಬ್ಬರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿದ್ದರು. ಬಸ್ಸು , ಕಾರು , ಬೈಕ್ ಗಳ ನಡುವೆ ಸರಣಿ ಅಪಘಾತ ನಡೆದಿತ್ತು. ಇಲ್ಲಿ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು , ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಸರಣಿ ಅಪಘಾತ ನಡೆದಿತ್ತು.
ಕೇರಳ - ಕರ್ನಾಟಕ ನಡುವಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ ಯಿಂದ ಕಾಸರಗೋಡು ತನಕ ಈಗ ಸಂಪೂರ್ಣ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು , ಈ ಹೊಂಡಗಳ ಪರಿಣಾಮ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿದೆ .ವಿಪರ್ಯಾಸ ಎಂದರೆ ರಾಷ್ಟ್ರೀಯ ಹೆದ್ದಾರೆಯಾದರೂ ಈ ರಸ್ತೆ ಡಾಮರೀಕರಣ ಗೊಳ್ಳದೆ ಐದು ವರ್ಷಗಳಾಗಿವೆ. ಕೊನೆಪಕ್ಷ ಈ ಅವಧಿಯಲ್ಲಿ ಹೊಂಡಾ ಮುಚ್ಚುವ ಕೆಲಸ ಕೂಡಾ ನಡೆದಿಲ್ಲ.
2016 ರಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸುವುದರೊಂದಿಗೆ ಈ ರಸ್ತೆಯ ಡಾಮರೀಕರಣಕ್ಕೆ ಬ್ರೇಕ್ ಬಿದ್ದಿತ್ತು .ತಲಪ್ಪಾಡಿಯಿಂದ ಕಾಸರಗೋಡು ತನಕ ರಸ್ತೆಯುದ್ದಕ್ಕೂ ಕಂಡು ಬರುತ್ತಿರುವುದು ಹೊಂಡಗಳು ಮಾತ್ರವಲ್ಲ. ಹೊಂಡಗಳಲ್ಲಿರುವ ರಸ್ತೆಯನ್ನು ಹುಡುಕಿಕೊಂಡು ಸಂಚರಿಸಬೇಕಿದೆ. ತಲಪ್ಪಾಡಿ,ಮಂಜೇಶ್ವರ,ಉಪ್ಪಳ,ಕುಂಬಳೆ, ಪೆರುವಾಡು,ಮೊಗ್ರಾಲ್,ಚೌಕಿ,ಕೊಪ್ಪರಬಜಾರ್,ಅಡ್ಕತ್ತಬೈಲು, ತಾಳಿಪಡ್ಪು ,ಕರಂದಕ್ಕಾಡು ಮೊದಲಾದೆಡೆಗಳಲ್ಲಿ ರಸ್ತೆ ಇಲ್ಲದಾಗಿ ಹೊಂಡಗಳಿಂದ ಸಂಚರಿಸಲು ತೊಡಕಾಗಿದೆ. ಕುಂಬಳೆ ಸೇತುವೆ , ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಮೀಟರ್ ಗಳಷ್ಟು ರಸ್ತೆ ಕೊಚ್ಚಿ ಹೋಗಿದ್ದು ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಹೆಚ್ಚಿನ ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ತಲಪಲು ಅಸಾಧ್ಯವಾಗಿ ಕೆಲವು ಟ್ರಿಪ್ ಗಳನ್ನೂ ಮೊಟಕುಗೊಳಿಸುವುದು ಅನಿವಾರ್ಯತೆ ಸಿಲುಕುತ್ತಿದೆ
ರಸ್ತೆ ಹೊಂಡ ಮುಚ್ಚಲು 2.10 ಕೋಟಿ ರೂ .ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ 70 ಲಕ್ಷ ರೂ . ಮಾತ್ರ ಮಂಜೂರಾಗಿದೆ ಎನ್ನುತ್ತಾರೆ ಅಧಿಕಾರಿಗಳು . ಇದರಲ್ಲಿ ಎಲ್ಲಾ ಹೊಂಡಗಳನ್ನು ಮುಚ್ಚಲು ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳ ವಾದ. ಕರ್ನಾಟಕದಲ್ಲಿ ತಲಪಾಡಿ ತನಕ ರಾಷ್ಟ್ರೀಯ ಹೆದ್ದಾರಿ 66 ರಸ್ತೆ 60 ಮೀಟರ್ ಅಗಲಗೊಂಡಿದೆ. ಆದರೆ ಇದು ಮುಂದೆ ಸಾಗಲೇ ಇಲ್ಲ. ಕೇರಳದಲ್ಲಿ 40 ಮೀಟರ್ ಅಗಲದ ಹೆದ್ದಾರಿ ಗೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದು ಹೋಗಿವೆ. ಆದರೆ ಇನ್ನೂ ಈ ಬಗ್ಗೆ ಅಂತಿಮ ಗೊಂಡಿಲ್ಲ . ಹಲವು ತಾಂತ್ರಿಕ , ಸ್ಥಳೀಯ ಸಮಸ್ಯೆಗಳ ನೆಪದಲ್ಲಿ ಇನ್ನೂ ಆರಂಭ ಹಂತದಲ್ಲೇ ಉಳಿದುಕೊಂಡಿದೆ. ಸರಕಾರದ , ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕೂಡಾ ಇದಕ್ಕೆ ಕಾರಣವಾಗಿದೆ .ಕೇರಳ - ಕರ್ನಾಟಕ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದರೂ ಇನ್ನೂ ಗಮನ ಹರಿಸುತ್ತಿಲ್ಲ. ಶಿಕ್ಷಣ, ವ್ಯಾಪಾರ, ಆಸ್ಪತ್ರೆ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಸಾವಿರಾರು ಮಂದಿ ದಿನಂಪ್ರತಿ ಆಶ್ರಯಿಸುವ ರಸ್ತೆ ಯಾಗಿದ್ದು , ಅಷ್ಟೇ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದೆ . ಆದರೆ ಈ ಹೆದ್ದಾರಿ ಅಭಿವೃದ್ದಿ ಬಗ್ಗೆ ಮಾತ್ರ ಕಿಂಚಿತ್ತೂ ಗಮನ ಹರಿಸಿಲ್ಲ. ಒಂದೆಡೆ ರಸ್ತೆಯ ಅವ್ಯವಸ್ಥೆ ಇನ್ನೊಂದೆಡೆ ಅಭಿವೃದ್ಧಿ ಕಾಣದ ರಾಷ್ಟೀಯ ಹೆದ್ದಾರಿ ಯಲ್ಲಿ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ರಸ್ತೆಯ ಅವ್ಯವಸ್ಥೆಗೆ ಜೀವಗಳು ಬಲಿಯಾಗುತ್ತಿದ್ದರೂ ಇನ್ನೂ ಆಡಳಿತ ವರ್ಗ ತಲೆಕೆಡಿಸಿಕೊಂಡಿಲ್ಲ.